ಸಾರಾಂಶ
ಕಿರಗಂದೂರು ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಸೋಮವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕಿರಗಂದೂರು ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಸೋಮವಾರ ನಡೆಯಿತು.ದಾನಿ ಹಾಗೂ ಕಾಫಿ ಬೆಳೆಗಾರ ಎಂ.ಪಿ.ಗೋಪಾಲ್ ಉದ್ಘಾಟಿಸಿ ಮಾತನಾಡಿ, ಹಿರಿಯರು ಗ್ರಾಮದಲ್ಲಿ ಶಾಲೆ ಕಟ್ಟಿಸಿದ್ದಾರೆ. ಅದನ್ನು ನಾವುಗಳು ಉಳಿಸಿ ಬೆಳೆಸಬೇಕಿದೆ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲೇಬೇಕು. ಈಗಾಗಲೇ ಆಂಗ್ಲಮಾಧ್ಯಮದಲ್ಲಿ ಎಲ್‌ಕೆಜಿ-ಯುಕೆಜಿ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ವಿದ್ಯೆ ಕಲಿಯುವ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಮಧ್ಯಮ ಮತ್ತು ಬಡವರ್ಗದ ಜನರಿಗೆ ಸರ್ಕಾರಿ ಶಾಲೆಗಳು ಎಂಬ ಭಾವನೆ ಹೋಗಬೇಕು. ಹಿಂದೆ ಎಲ್ಲರೂ ಸರ್ಕಾರಿ ಶಾಲೆಗಳಲ್ಲಿಯೇ ಓದಿ ಉನ್ನತ ಉದ್ಯೋಗ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಮುಚ್ಚುವುದಕ್ಕೆ ಯಾವುದೇ ಗ್ರಾಮದಲ್ಲೂ ಅವಕಾಶ ಕೊಡಬಾರದು ಎಂದು ಹೇಳಿದರು.ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪಿ.ಬಿ. ಪೊನ್ನಪ್ಪ ಮಾತನಾಡಿ, ದಾನಿಗಳ ಸಹಕಾರದಿಂದಲೆ ಪೂರ್ವ ಪ್ರಾಥಮಿಕ ತರಗತಿಗಳು ಆಂಗ್ಲ ಮಾಧ್ಯಮದಲ್ಲಿ ನಡೆಯುತ್ತಿದೆ. ೧ನೇ ತರಗತಿಗೆ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿದೆ. ಮುಂದಿನ ಸಾಲಿನಲ್ಲಿ ದಾನಿಗಳ ಸಹಕಾರದಿಂದ ಶಾಲಾ ವಾಹನ ಖರೀದಿಸಲು ಯೋಜನೆ ರೂಪಿಸಲಾಗಿದೆ ಎಂದರು. ಹಳೆ ವಿದ್ಯಾರ್ಥಿಗಳು ಶಾಲೆಗೆ ಅನೇಕ ಕೊಡುಗೆಗಳನ್ನು ನೀಡಿದರು. ಚೇತನ್ ಎಲ್‌ಕೆಜಿ ಮಕ್ಕಳಿಗೆ ಪುಸ್ತಕ ಮತ್ತು ಇಂಟರ್‌ನೆಟ್ ಸೌಲಭ್ಯ ಒದಗಿಸಿದರು. ಉದ್ಯಮಿ ಎ.ಎನ್.ಪದ್ಮನಾಭ, ಒಂದು ಲಕ್ಷ ರೂ.ಗಳ ಮೊತ್ತದ ಲ್ಯಾಪ್‌ಟಾಪ್ ಮತ್ತು ಪ್ರೊಜೆಕ್ಟರ್ ನೀಡಿದರು. ಜನತಾ ಕಾಲನಿ ಶ್ರೀ ಮಂಜುನಾಥ ಸ್ವಸಹಾಯ ಸಂಘದ ಸದಸ್ಯರು ಸ್ಮಾರ್ಟ್ ಟಿವಿ ನೀಡಿದರು. ಕೆ.ಪಿ. ಪೂಜಾ ಮತ್ತು ಪ್ರಶಾಂತ್ ಗ್ರೀನ್‌ಬ್ರೋರ್ಡ್ ಕೊಟ್ಟರು. ಕೆ.ಈ. ಭರತ್ ಪ್ರೊಜೆಕ್ಟರ್ ಸ್ಕ್ರೀನ್ ನೀಡಿದರು. ಪಿ.ಬಿ. ಪೊನ್ನಪ್ಪ, ಪ್ರಸನ್ನಕುಮಾರ್, ವಿಜಯ, ರೇವಣ್ಣ, ನಿತೀನ್ ಅವರುಗಳು ಎಲ್‌ಕೆಜಿ ತರಗತಿ ಕೊಠಡಿಗೆ ನೆಲಹಾಸು ಹಾಕಲು ಜವಾಬ್ದಾರಿ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಸುಕನ್ಯ, ಉಪಾಧ್ಯಕ್ಷ ಗಂಗಾಧರ್, ಮುಖ್ಯಶಿಕ್ಷಕಿ ವಿನೋದಾ, ಶಿಕ್ಷಕರಾದ ರಶ್ಮಿ, ಕೆಂಪರಾಜ್ ಇದ್ದರು.