ಎಸ್ಸಿ-ಎಸ್ಟಿಯವರಿಗೆ ಸೌಲಭ್ಯ ವಿತರಣೆ

| Published : May 17 2025, 01:59 AM IST

ಸಾರಾಂಶ

ಶಿರಳಗಿ ಗ್ರಾಪಂನಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರತಿ ಮನೆಗೆ ನೀರಿನ ಟ್ಯಾಂಕ್ ನೀಡಲಾಗಿದೆ.

ಸಿದ್ದಾಪುರ: ತಾಲೂಕಿನ ಶಿರಳಗಿ ಗ್ರಾಪಂ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ವಿವಿಧ ಯೋಜನೆಗಳಡಿ ಮಂಜೂರಾದ ಸೌಲಭ್ಯಗಳನ್ನು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ವಿತರಿಸಿದರು.ಶಿರಳಗಿ ಗ್ರಾಪಂನಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರತಿ ಮನೆಗೆ ನೀರಿನ ಟ್ಯಾಂಕ್ ನೀಡಲಾಗಿದೆ. ಶಾಸಕ ಭೀಮಣ್ಣ ನಾಯ್ಕ ಫಲಾನುಭವಿಗಳಿಗೆ ಸಿಂಟೆಕ್ಸ್ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕಪಾಟು ವಿತರಿಸಿ ಮಾತನಾಡಿ, ಪಂಚಾಯ್ತಿಯ ಹಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರತಿ ಮನೆಗೆ ನೀರಿನ ಟ್ಯಾಂಕ್ ನೀಡುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯವಾಗಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡ ಪಂಚಾಯತ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಈ ರೀತಿಯ ಒಳ್ಳೆಯ ಕೆಲಸಗಳಿಗೆ ಶಾಸಕನಾಗಿ ಸದಾ ನಿಮಗೆ ಸಹಕಾರ ನೀಡುತ್ತೇನೆ. ಮಳೆ-ಬಿಸಿಲೆನ್ನದೇ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಮೆಚ್ಚುವಂತದ್ದಾಗಿದ್ದು, ಅವರಿಗೂ ಕಪಾಟು ನೀಡಿರುವುದು ಶ್ಲಾಘನೀಯ ಕೆಲಸವಾಗಿದೆ. ಮಳೆಗಾಲದ ಮುನ್ನೆಚ್ಚರಿಕಾ ಕ್ರಮಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಸೂಚಿಸಿದರು.

ಗ್ರಾಪಂ ಅಧ್ಯಕ್ಷ ಮಾರುತಿ ನಾಯ್ಕ ಅಧ್ಯಕ್ಷತೆ ವಹಿಸಿ ಆಗಬೇಕಾದ ಕೆಲಸಗಳ ಕುರಿತು ಶಾಸಕರ ಗಮನ ಸೆಳೆದರು.

ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ನಾಯ್ಕ, ಸದಸ್ಯರಾದ ಶ್ರೀಕಾಂತ ಭಟ್, ರಾಮು ನಾಯ್ಕ, ಶಶಿಕಲಾ, ಲತಾ ನಾಯ್ಕ, ವನಜಾಕ್ಷಿ, ಶಿರಳಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪರಶುರಾಮ ನಾಯ್ಕ, ಜಿಪಂ ಮಾಜಿ ಸದಸ್ಯ ವಿ.ಎನ್.ನಾಯ್ಕ ಹಾಗೂ ತಾಪಂ ಮಾಜಿ ಅಧ್ಯಕ್ಷ ಸಿ.ಆರ್.ನಾಯ್ಕ ಉಪಸ್ಥಿತರಿದ್ದರು.

ಸಿದ್ದಾಪುರ ತಾಲೂಕಿನ ಶಿರಳಗಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಫಲಾನುಭವಿಗಳಿಗೆ ಸಿಂಟೆಕ್ಸ್ ಟ್ಯಾಂಕ್ ವಿತರಿಸಿದರು.