ಸಾರಾಂಶ
ಕನ್ನಡಪ್ರಭ ವಾರ್ತೆ ಮುಳಬಾಗಿಲು ರಾಜ್ಯ ಒಕ್ಕಲಿಗರ ಜಾಗೃತಿ ಸಂಘದಿಂದ ನೂತನ ವರ್ಷದಲ್ಲಿ ತಾಲೂಕಿನ ೧ ಸಾವಿರ ರೈತರಿಗೆ ಉಚಿತ ನೇಗಿಲು ವಿತರಣೆ ಮಾಡಲಿದೆ ಎಂದು ರಾಜ್ಯ ಒಕ್ಕಲಿಗರ ಜಾಗೃತಿ ಸಂಘದ ತಾಲ್ಲೂಕು ಅಧ್ಯಕ್ಷ ಕೆಇಬಿ ರಮೇಶ್ ಗೌಡ ತಿಳಿಸಿದರು.ನಗರದ ರಾಜ್ಯ ಒಕ್ಕಲಿಗರ ಜಾಗೃತಿ ಸಂಘದ ಕಚೇರಿಯಲ್ಲಿ ೨೦೨೫ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಂಘದಿಂದ ಕ್ಯಾಲೆಂಡರ್‌ಗಳನ್ನು ತಾಲೂಕಿನಲ್ಲಿ ಎಲ್ಲ ಸಮುದಾಯಗಳಿಗೆ ಹಂಚಲಾಗುವುದು ಎಂದು ತಿಳಿಸಿದರು.
ಹಳೇ ಪದ್ಧತಿ ಉಳಿಸಬೇಕುಮುಂಬರುವ ಫೆಬ್ರವರಿಯಲ್ಲಿ ದಿನಾಂಕ ನಿಗದಿಪಡಿಸಿ ರಾಜ್ಯ ಒಕ್ಕಲಿಗರ ಜಾಗೃತಿ ಸಂಘದಿಂದ ತಾಲೂಕಿನಲ್ಲಿ ನಾಟಿ ಎತ್ತುಗಳು ಇದ್ದು ಉಳುಮೆ ಮಾಡುವ ರೈತರನ್ನು ಗುರುತಿಸಿ ಅವರಿಗೆ ಉಚಿತವಾಗಿ ನೇಗಿಲು ನೀಡಲಾಗುವುದು. ಆಧುನಿಕ ಕಾಲದಲ್ಲಿ ರೈತರು ಟ್ರ್ಯಾಕ್ಟರ್ ಹಾಗೂ ಯಂತ್ರಗಳ ಮೂಲಕ ವ್ಯವಸಾಯ ಮಾಡುತ್ತಿದ್ದಾರೆ ಇದರಿಂದ ನಮ್ಮ ಪೂರ್ವಿಕರು ಉಳಿಸಿಕೊಂಡು ಬಂದಿರುವ ಪದ್ಧತಿಗಳು ನಶಿಸಿ ಹೋಗುತ್ತಿವೆ ಎಂದರು.
ಸಾವಿರ ರೈತರಿಗೆ ನೇಗಿಲುಆ ಉದ್ದೇಶದ ಹಿನ್ನೆಲೆಯಲ್ಲಿ ನಮಗೆ ಅನ್ನ ಕೊಡುವ ಈ ದೇಶದ ರೈತರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಲು ೧ ಸಾವಿರ ನೇಗಿಲು ತಯಾರು ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಮುಂದಿನ ಫೆಬ್ರವರಿಯಲ್ಲಿ ಬೃಹತ್ ಕಾರ್ಯಕ್ರಮ ರೂಪಿಸಿ ಸಂಘದಿಂದ ರೈತರಿಗೆ ಉಚಿತ ನೇಗಿಲು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಪ್ರಜಾ ವೇದಿಕೆ ಗೌರವಾಧ್ಯಕ್ಷ ಬೋಗೇಶ್, ಮುಖಂಡರಾದ ಕೃಷ್ಣಮೂರ್ತಿ, ಬಾಬಣ್ಣ, ನಾಗರಾಜ್, ವೆಂಕಟಪ್ಪ ಇದ್ದರು.