ಮೈತ್ರಿ ಪಕ್ಷದಿಂದಲೇ ಗಿಫ್ಟ್‌ ಕಾರ್ಡ್‌ ಹಂಚಿಕೆ: ಡಿಕೆಶಿ

| Published : Apr 27 2024, 01:19 AM IST / Updated: Apr 27 2024, 11:44 AM IST

ಮೈತ್ರಿ ಪಕ್ಷದಿಂದಲೇ ಗಿಫ್ಟ್‌ ಕಾರ್ಡ್‌ ಹಂಚಿಕೆ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ನಮ್ಮ ಪಕ್ಷ 10ಕ್ಕಿಂತ ಹೆಚ್ಚು ಸೀಟು ಗೆಲ್ಲಲಿದೆ. ಬಿಜೆಪಿ ಕೇವಲ ಸುಳ್ಳು ಭರವಸೆ ನೀಡುತ್ತಾ ಬಂದಿದ್ದು ಪ್ರಧಾನಮಂತ್ರಿಗಳು ರಾಜ್ಯಕ್ಕೆ ಬಂದರೂ ಯಾವುದೇ ನೆರವು ನೀಡಿಲ್ಲ. ನಾವು ರಾಜ್ಯದ ಹಿತಕ್ಕಾಗಿ ಹೋರಾಟ ಮಾಡಿದ್ದು, ಜನ ಬೆಂಬಲಿಸುವ ವಿಶ್ವಾಸವಿದೆ.

 ಕನಕಪುರ :  ತಾನು ಅಕ್ರಮ ಮಾಡಿ, ಅದನ್ನು ಬೇರೆಯವರ ಮೂತಿಗೆ ಒರೆಸುವುದು ಮಾಜಿ ಸಿಎಂ ಕುಮಾರಸ್ವಾಮಿ ಜಾಯಮಾನ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ವಗ್ರಾಮ ತಾಲೂಕಿನ ದೊಡ್ಡಾಲಹಳ್ಳಿಯ ಮತಗಟ್ಟೆ ಸಂಖ್ಯೆ 245ರಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿ ಮಾತನಾಡಿದ ಶಿವಕುಮಾರ್‌, ಚುನಾವಣೆಯಲ್ಲಿ ಗಿಫ್ಟ್ ಕಾರ್ಡ್ ನೀಡುತ್ತಿದ್ದಾರೆಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಗಿಫ್ಟ್ ಕಾರ್ಡ್, ಹಣ ಹಂಚುತ್ತಿರುವುದು ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷದವರೇ ಅವರು ತಾವು ಮಾಡಬಾರದ್ದನ್ನು ಮಾಡಿ ಬೇರೆಯವರ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರೇ ಕ್ಷೇತ್ರದಲ್ಲಿ ಕಾರ್ಡ್‌ಗಳನ್ನು ಹಂಚಿ ಈಗ ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ನಾವು ಜನರ ಮುಂದೆ ಕೈ ಮುಗಿದು ಮತ ಕೇಳುತ್ತಿದ್ದರೆ, ಅವರು ಚುನಾವಣೆ ಸಂದರ್ಭದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಕುಮಾರಸ್ವಾಮಿ ಚುನಾವಣೆಗೂ ಮುನ್ನ ಮಂಡ್ಯಕ್ಕೆ ಹೋಗಿದ್ದರಾ? ರಾಮನಗರ, ಕನಕಪುರಕ್ಕೆ ಹೋಗಿದ್ದರಾ? ಹೀಗಾಗಿ ಹಿಂಡು ಹಿಂಡಾಗಿ ಅವರ ಕಾರ್ಯಕರ್ತರು ನಮ್ಮ ಪಕ್ಷ ಸೇರುತ್ತಿದ್ದಾರೆ ಎಂದು ತಿಳಿಸಿದರು.

ನಮ್ಮ ವಿರುದ್ಧ ಏನಾದರೂ ಸಾಕ್ಷಿ ಇದ್ದರೆ ಆಯೋಗಕ್ಕೆ ದೂರು ನೀಡಲಿ ಲುಲು ಮಾಲ್‌ನಲ್ಲಿ 10 ಸಾವಿರ ಗಿಫ್ಟ್ ಕೂಪನ್ ನೀಡುತ್ತಿದ್ದಾರೆ ಎಂಬ ಕುಮಾರಸ್ವಾಮಿಯವರ ಆರೋಪಕ್ಕೆ ಉತ್ತರಿಸಿ ಅವರು ಸತ್ಯಹರಿಶ್ಚಂದ್ರನ ಮೊಮ್ಮಗ ಅಲ್ಲವೇ, ಚುನಾವಣಾ ಆಯೋಗಕ್ಕೆ ಹೋಗಿ ದೂರು ನೀಡಲು ಹೇಳಿ ಖಾಲಿ ಮಾತಿನ ಮೂಲಕ ಹಿಟ್ ಅಂಡ್ ರನ್ ಮಾಡುವುದಲ್ಲ. ಸಾಕ್ಷಿ ಇದ್ದರೆ ಆಯೋಗಕ್ಕೆ ದೂರು ನೀಡಲಿ. ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಇದರಿಂದ ಜನರಿಗೆ ಶಕ್ತಿ ಬಂದಿದೆ. ಅವರ ಮನೆಯಲ್ಲಿ ಕೆಲಸ ಮಾಡುವವರಿಗೂ ನಮ್ಮ ಗ್ಯಾರಂಟಿ ತಲುಪುತ್ತಿದೆ. ಅವರ ಮತಗಳು ನಮಗೆ ಬರಲಿದೆ. ಈಗ ಐದು ನ್ಯಾಯ ಯೋಜನೆಗಳ ಮೂಲಕ 25 ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದು, ನಾವು ಬಸವಣ್ಣನ ನಾಡಿನವರು ನುಡಿದಂತೆ ನಡೆದಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಬಸವಣ್ಣನ ನಾಡಿನಲ್ಲಿ ಜನಿಸಿದ್ದು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿ ಜನರ ಬದುಕನ್ನು ಬದಲಾವಣೆ ಮಾಡಿದ್ದೇವೆ ಎಂದು ಹೇಳಿದರು.

ನಮ್ಮ ಪಕ್ಷದ ನಾಯಕರ ಮನೆ ಮೇಲೆ ದಾಳಿ ಮಾಡಿ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ನಾನು ಐಟಿ ಇಲಾಖೆ ಕಚೇರಿಗೆ ನಮ್ಮ ನಾಯಕರು ಚುನಾವಣೆಗೆ ಬರಬಾರದು ಎಂದು ಷಡ್ಯಂತ್ರ ರೂಪಿಸುತ್ತಿದ್ದಾರೆ. ಇಲ್ಲಿ ಶಾಲೆಗಳಿರುವ ಜಾಗ ನಮ್ಮ ಸ್ವಂತ ಜಾಗ. ಅದನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ದಾನ ಮಾಡಿದ್ದೇವೆ. ಈ ಕ್ಷೇತ್ರದಲ್ಲಿ ಇಂತಹ ಎಂಟು ಕಟ್ಟಡಗಳಿವೆ ನೋಡಿ, ಕುಮಾರಸ್ವಾಮಿ ಬಂದು ಈ ಕಟ್ಟಡ ಕಟ್ಟಿದ್ದನಾ? ಈ ರೀತಿ ತಮ್ಮ ಆಸ್ತಿ ದಾನ ಮಾಡಿದ್ದಾರಾ? ಅವರಿಗೆ ಬೇರೆಯವರ ಏಳಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಅವರು ಬಿಜೆಪಿ ವಿರುದ್ಧ ಮುಗಿಬೀಳುತ್ತಾರೆ. ಅವರ ಮುಂದಿನ ಟಾರ್ಗೆಟ್ ಬಿಜೆಪಿಯಾಗಿರುತ್ತದೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಹಬ್ಬದಂದು ಕುಟುಂಬ ಸಮೇತರಾಗಿ ಹುಟ್ಟೂರಿನಲ್ಲಿ ಮತದಾನ ಮಾಡಿದ್ದು ಈ ಊರಿನಿಂದ ಒಬ್ಬ ಮಗನನ್ನು 8 ಬಾರಿ ವಿಧಾನಸಭೆಗೆ, ಮತ್ತೊಬ್ಬ ಮಗನನ್ನು ಮೂರು ಬಾರಿ ಸಂಸತ್ತಿಗೆ ಕಳುಹಿಸಿದ್ದಾರೆ. ನಾವೂ ಸಹ ಜನರ ಸೇವೆ ಮಾಡಿದ್ದೇವೆ. ರಾಜ್ಯದಲ್ಲಿ ನಮ್ಮ ಪಕ್ಷದ ಪರವಾಗಿ ಒಳ್ಳೆಯ ವಾತಾವರಣವಿದ್ದು ನಾವು ಕೊಟ್ಟ ಮಾತು ಉಳಿಸಿಕೊಂಡಿರುವ ಪರಿಣಾಮ ಜನರಿಗೆ ನಮ್ಮ ಮೇಲೆ ನಂಬಿಕೆ ಬಂದಿದೆ. ಡಿ.ಕೆ.ಸುರೇಶ್ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ರಾಜ್ಯದಲ್ಲಿ ನಮ್ಮ ಪಕ್ಷ 10ಕ್ಕಿಂತ ಹೆಚ್ಚು ಸೀಟು ಗೆಲ್ಲಲಿದೆ. ಬಿಜೆಪಿ ಕೇವಲ ಸುಳ್ಳು ಭರವಸೆ ನೀಡುತ್ತಾ ಬಂದಿದ್ದು ಪ್ರಧಾನಮಂತ್ರಿಗಳು ರಾಜ್ಯಕ್ಕೆ ಬಂದರೂ ಯಾವುದೇ ನೆರವು ನೀಡಿಲ್ಲ. ನಾವು ರಾಜ್ಯದ ಹಿತಕ್ಕಾಗಿ ಹೋರಾಟ ಮಾಡಿದ್ದು, ಜನ ಬೆಂಬಲಿಸುವ ವಿಶ್ವಾಸವಿದೆ. ನಮ್ಮ ದೇಶದಲ್ಲಿ ಉತ್ತಮ ಸಂವಿಧಾನವಿದ್ದು, ಸಂವಿಧಾನದ ಆಶಯದಂತೆ ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣಲಾಗುವುದು ಎಂದು ತಿಳಿಸಿದರು.

ಎಚ್ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ:

ನಾವು ಐದು ಗ್ಯಾರಂಟಿ ಕೊಟ್ಟು ಜನರ ಬಳಿ ಮತ ಕೇಳುತ್ತಿದ್ದೇವೆ. ಬಿಜೆಪಿ-ಜೆಡಿಎಸ್‌ನವರು ಸಹ ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಕುಮಾರಸ್ವಾಮಿ ತೋಟದ ಮನೆಯಲ್ಲಿ ಕೆಲಸ ಮಾಡುವವರು, ಅವರ ಚಾಲಕರು ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದ್ದು, ಅವರೂ ಕಾಂಗ್ರೆಸ್ ಗೆ ಮತ ಹಾಕಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಐಟಿ, ಇಡಿ ಮೂಲಕ ನಮ್ಮವರಿಗೆ ಕಿರುಕುಳ ಕೊಡುತ್ತಿದ್ದು ಚುನಾವಣೆ ಮುಗಿದ ಮೇಲೆ ನಾನೆ ಹೋಗಿ ಇದರ ಬಗ್ಗೆ ವಿವರಣೆ ಪಡೆಯಲಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆ ಆದಮೇಲೆ ಬಿಜೆಪಿ ವಿರುದ್ಧವೇ ಮಾತನಾಡಲಿದ್ದಾರೆ. ಈಗಾಗಲೇ ಸುಮಲತಾ ಹಾಗೂ ಪ್ರೀತಂ ಗೌಡ ನಮಗೆ ಸಹಕಾರ ನೀಡುತ್ತಿಲ್ಲ ಎಂದು ಹೇಳಿದ್ದು ಚುನಾವಣೆ ಮುಗಿದ ಮೇಲೆ ಬಿಜೆಪಿ ವಿರುದ್ಧ ಮಾತನಾಡುತ್ತಾರೆ ಕಾದು ನೋಡ್ತಾ ಇರಿ ಎಂದು ಹೇಳಿದರು.