ಸೋಲಿನ ಭೀತಿಯಿಂದ ಮತದಾರರಿಗೆ ಗಿಫ್ಟ್ ಹಂಚಿಕೆ

| Published : Feb 27 2024, 01:33 AM IST / Updated: Apr 27 2024, 06:03 AM IST

ಸಾರಾಂಶ

ಮಾಗಡಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಿಫ್ಟ್ ಕಾರ್ಡ್‌ ಹಂಚಿ ಮತ ಪಡೆದದ್ದರಿಂದ ಈಗ ಕಾಂಗ್ರೆಸ್ ಮತ್ತೊಮ್ಮೆ ಎಂಪಿ ಚುನಾವಣೆಗೆ ಮತ ಕೇಳಲು ಹೋದರೆ ಮತದಾರರು ಬಯ್ಯುತ್ತಾರೆಂಬ ಭಯಕ್ಕೆ ಸಮಾವೇಶಗಳ ಹೆಸರಿನಲ್ಲಿ ಗಿಫ್ಟ್ ಹಂಚುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಆರೋಪಿಸಿದರು.

ಮಾಗಡಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಿಫ್ಟ್ ಕಾರ್ಡ್‌ ಹಂಚಿ ಮತ ಪಡೆದದ್ದರಿಂದ ಈಗ ಕಾಂಗ್ರೆಸ್ ಮತ್ತೊಮ್ಮೆ ಎಂಪಿ ಚುನಾವಣೆಗೆ ಮತ ಕೇಳಲು ಹೋದರೆ ಮತದಾರರು ಬಯ್ಯುತ್ತಾರೆಂಬ ಭಯಕ್ಕೆ ಸಮಾವೇಶಗಳ ಹೆಸರಿನಲ್ಲಿ ಗಿಫ್ಟ್ ಹಂಚುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾಧ್ಯಮಗಳ ಮುಂದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬಾಲಕೃಷ್ಣ ಗಿಫ್ಟ್ ಕಾರ್ಡ್‌ ಹಂಚಿ ಗಿಫ್ಟ್ ನೀಡಿಲ್ಲ, ಅವರು ನೀಡದಿದ್ದರೆ ನಾನೇ ನೀಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದೆ. ನನ್ನ ಹೇಳಿಕೆ ಭಯಕ್ಕೆ ಈಗ ಮತದಾರರಿಗೆ ಗಿಫ್ಟ್ ಹಂಚುತ್ತಿದ್ದಾರೆ. ಇದರಿಂದ ಮತದಾರರಿಗೆ ಹಿಂದೆ ಹಂಚಿದ ಕಾರ್ಡ್‌ಗಳಿಗೆ ಗಿಫ್ಟ್ ಸಿಕ್ಕಿದೆ. ಚುನಾವಣೆ ಇನ್ನೂ ಆರಂಭವೇ ಆಗಿಲ್ಲ. ಆಗಲೇ ಸೋಲಿನ ಭಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ವಿಚಾರವಾಗಿ ಮಹಿಳಾ ಸಮಾವೇಶ ನಡೆಸುವ ನೆಪದಲ್ಲಿ ತಾಲೂಕಿನ ಸಿಡಿಪಿಒ, ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಉಪಯೋಗಿಸಿಕೊಂಡು ಸಮಾವೇಶಕ್ಕೆ ಹೆಚ್ಚಿನ ಮಹಿಳೆಯರನ್ನು ಸೇರಿಸುವ ನೆಪದಲ್ಲಿ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತಾಲೂಕಿನ ಮಹಿಳೆಯರ ಹೆಸರನ್ನು ನಮೂದಿಸಿಕೊಂಡು ಸಮಾವೇಶಕ್ಕೆ ಬರುವ ಮಹಿಳೆಯರಿಗೆ ಮಾತ್ರ ಗಿಫ್ಟ್‌ ನೀಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರ ಬಳಿಯಿರುವ ಮತ್ತಷ್ಟು ಗಂಟನ್ನು ಬಿಚ್ಚಿಸುತ್ತೇವೆ ಎಂದು ಮಾಜಿ ಶಾಸಕರು ಹೇಳಿದರು.

300 ರು. ಗಿಪ್ಟ್‌ಗಳಿಗೆ ಮರಳಾಗಲ್ಲ:

ಕಾಂಗ್ರೆಸ್‌ನವರು ಹಂಚುತ್ತಿರುವ 300 ರು.ಗಳ ಗಿಫ್ಟ್‌ಗಳಿಗೆ ಮಹಿಳೆಯರು ಮರಳಾಗುವುದಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ ಪ್ರಧಾನೆ ನರೇಂದ್ರ ಮೋದಿ ಅವರ ಗೆಲುವಿಗೆ ಶ್ರಮಿಸುತ್ತೇವೆ. ರಾಮನಗರ, ಮಾಗಡಿ ಕ್ಷೇತ್ರದ ಮತದಾರರಿಗೆ ಗಿಫ್ಟ್‌ಗಳನ್ನು ನೀಡುತ್ತಿದ್ದಾರೆ. ಇದರಿಂದ ಮುಂದಿನ ಲೋಕಸಭಾ ಚುನಾವಣೆಗೆ ಯಾವುದೇ ಪ್ರಭಾವ ಬೀರುವುದಿಲ್ಲ. ನಮ್ಮ ತಾಲ್ಲೂಕಿನ ಜನತೆ ಕೇವಲ ಗಿಫ್ಟ್‌ಗಳಿಗೆ ಅವರ ಅಮೂಲ್ಯ ಮತವನ್ನು ಮಾರಿಕೊಳ್ಳುವುದಿಲ್ಲ ಎಂದರು.

ಶಾಸಕರ ಜಮೀನಿನಲ್ಲಿ ಖರ್ಜೂರ ಪಿಸ್ತಾ ಬೆಳೀತಾರಾ?

ಶಾಸಕ ಬಾಲಕೃಷ್ಣ ಅವರು ಬಿಜೆಪಿಯ ಸಿ.ಟಿ.ರವಿ ಅವರ ಬಗ್ಗೆ ರಾಜಕೀಯಕ್ಕೆ ಬಂದು ಸಾಕಷ್ಟು ಆಸ್ತಿ ಮಾಡಿದ್ದಾರೆಂಬ ಹೇಳಿಕೆಗೆ ಮಾಜಿ ಶಾಸಕ ಎ.ಮಂಜುನಾಥ್ ಪ್ರತಿಕ್ರಿಯಿಸಿ ನಮ್ಮ ನಾಯಕ ಕುಮಾರಸ್ವಾಮಿ ಬಗ್ಗೆ ಕಾಂಗ್ರೆಸ್ ಮುಖಂಡರು ಏಕವಚನದಲ್ಲಿ ಮಾತನಾಡುತ್ತಾರೆ. ಸಿ.ಟಿ.ರವಿಯವರು ಕಾಫಿ, ಟೀ ಬೆಳೆಗಳನ್ನು ಬೆಳೆಯದೆ ಮುಂದೆ ಬಂದಿದ್ದಾರೆ. ಶಾಸಕ ಬಾಲಕೃಷ್ಣ ಅವರು ಹುಲಿಕಟ್ಟೆ ಜಮೀನಿನಲ್ಲಿ ಖರ್ಜೂರ, ಫಿಸ್ತಾ, ಬಾದಾಮಿ ಬೆಳೆದು ಎಷ್ಟು ಕೋಟಿ ಆಸ್ತಿ ಮಾಡಿದ್ದಾರೆ ಎಂಬುದು ಚುನಾವಣೆ ವೇಳೆ ತಾವೇ ಘೋಷಣೆ ಮಾಡಿರುವ ಆಸ್ತಿಗಳಿಂದ ತಿಳಿಯುತ್ತದೆ. ಬಿಜೆಪಿ ಬಿಟ್ಟ ನಂತರ ಇವರ ಚುನಾವಣೆಗೆ ಮತದಾರರೇ ಹಣ ಹಾಕಿ ಚುನಾವಣೆ ಮಾಡಿದ್ದೇವೆ ಎಂದು ಅವರ ಕಾರ್ಯಕರ್ತರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಈಗ ಎಷ್ಟು ಕೋಟಿ ಮಾಡಿದ್ದಾರೆ. ಈ ಆಸ್ತಿ ಎಲ್ಲಾ ಅವರ ಜಮೀನಿನಲ್ಲಿ ಬೆಳೆದ ಬೆಳೆಯಿಂದ ಬಂದಿತ್ತಾ ಎಂದು ಶಾಸಕರನ್ನು ಮಾಜಿ ಶಾಸಕರು ಪ್ರಶ್ನಿಸಿದರು.

ಈ ವೇಳೆ ಪ್ರಾಧಿಕಾರ ಪುರಸಭೆ ಸದಸ್ಯರಾದ ಎಂ.ಎನ್.ಮಂಜುನಾಥ್, ಮುಖಂಡರಾದ ರಂಗಣಿ, ರೂಪೇಶ್ ಕುಮಾರ್, ಚಿಕ್ಕಣ್ಣ, ತಾಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ದೊಡ್ಡಿ ಲೋಕೇಶ್, ರಿಯಾಜ್ ಇತರರಿದ್ದರು. ಫೋಟೋ 26ಮಾಗಡಿ1:

ಮಾಗಡಿಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.