ವಿಶ್ವ ಬಿಲ್ಲವ ಮಹಿಳಾ ಸಂಘದಿಂದ ಸಹಾಯಧನ ವಿತರಣೆ

| Published : Aug 12 2024, 01:02 AM IST

ವಿಶ್ವ ಬಿಲ್ಲವ ಮಹಿಳಾ ಸಂಘದಿಂದ ಸಹಾಯಧನ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೆಡಿಕಲ್‌ ಸೈನ್ಸ್‌ನಲ್ಲಿ 7ನೇ ರ್‍ಯಾಂಕ್‌ ಪಡೆದ ಡಾ. ಕಾಜಲ್‌ ಅಂಚನ್‌ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುವಿಶ್ವ ಬಿಲ್ಲವ ಮಹಿಳಾ ಸಂಘದಿಂದ ನಾಲ್ಕನೇ ವರ್ಷದ ವಿಶೇಷ ಕಾರ್ಯಕ್ರಮ, ಅರ್ಹ ಫಲಾನುಭವಿಗಳು, ಅಶಕ್ತರಿಗೆ ಸಹಾಯಧನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಅನುಷಾ, ವಿಶ್ವ ಬಿಲ್ಲವ ಮಹಿಳಾ ಸಂಘವು ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಜತೆ ಮಹಿಳಾ ಶಕ್ತಿಯನ್ನು ಸಂಘಟಿತಗೊಳಿಸುತ್ತಿದೆ. ಮಾತ್ರವಲ್ಲದೆ ನೊಂದವರಿಗೆ ನೆರವು ನೀಡುವ ಮೂಲಕ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ ಮಾತನಾಡಿ, ಧಾರ್ಮಿಕ, ಸಾಂಸ್ಕೃತಿಕ, ಶಿಕ್ಷಣ, ಸಾಮಾಜಿಕ ಕ್ಷೇತ್ರಕ್ಕೆ ವಿಶ್ವ ಬಿಲ್ಲವ ಮಹಿಳಾ ಸಂಘ ನೀಡಿದ ಕೊಡುಗೆ ಅಪಾರವಾದುದು. ಈ ಮೂಲಕ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ, ದೂರದೃಷ್ಟಿತ್ವವನ್ನು ಸಂಘವು ಸಾಕಾರಗೊಳಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉರ್ಮಿಳಾ ರಮೇಶ್‌ ಕುಮಾರ್‌ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಅನುಗ್ರಹದೊಂದಿಗೆ ಸಂಘಟನೆ- ಸಂಪರ್ಕ- ಸಹಕಾರ ತತ್ವದಡಿ ವಿಶ್ವ ಬಿಲ್ಲವ ಮಹಿಳಾ ಸಂಘ ಕಾರ್ಯಾಚರಿಸುತ್ತಿದೆ. ಈ ಬಾರಿಯೂ ಸಂಘದ ವತಿಯಿಂದ 21 ಮಂದಿ ಅಶಕ್ತರಿಗೆ ನೆರವು ವಿತರಿಸಲಾಗಿದೆ ಎಂದರು.

ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಎಜ್ಯುಕೇಶನ್‌ ಟ್ರಸ್ಟ್‌ನ ಕೋಶಾಧಿಕಾರಿ ದೀಪಕ್‌ ಕೋಟ್ಯಾನ್‌, ಕಾಪಿಕಾಡ್‌ ಕ್ಲಸ್ಟರ್‌ ಶಾಲಾ ಶಿಕ್ಷಣ ಇಲಾಖೆ ಉಸ್ತುವಾರಿ ಅಧಿಕಾರಿ ವಿನೋದಾ ಅಮೀನ್‌ ಇದ್ದರು. ಇದೇ ಸಂದರ್ಭ ಮೆಡಿಕಲ್‌ ಸೈನ್ಸ್‌ನಲ್ಲಿ 7ನೇ ರ್‍ಯಾಂಕ್‌ ಪಡೆದ ಡಾ. ಕಾಜಲ್‌ ಅಂಚನ್‌ ಅವರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷೆ ವಿಜಯಾ ಅರುಣ್‌ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಜಾತಾ ಸುವರ್ಣ ವಂದಿಸಿದರು. ಕೆ.ಎ. ರೋಹಿಣಿ ನಿರೂಪಿಸಿದರು.