ಕಲಿಕಾ ನ್ಯೂನತೆ ಸರಿಪಡಿಸಿ ಮಕ್ಕಳ ಸಾಮರ್ಥ್ಯ ಹೆಚ್ಚಿಸಿ:ಅಲೋಕ್ ಸಿನ್ಹಾ

| Published : Jun 26 2024, 12:44 AM IST

ಕಲಿಕಾ ನ್ಯೂನತೆ ಸರಿಪಡಿಸಿ ಮಕ್ಕಳ ಸಾಮರ್ಥ್ಯ ಹೆಚ್ಚಿಸಿ:ಅಲೋಕ್ ಸಿನ್ಹಾ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಕಲಿಕೆಗೆ ಶೇ.10 ರಷ್ಟು ಸಹಾಯವನ್ನು ಶ್ರವಣ ಸಾಧನ ಮಾಡಲಿದೆ. ಉಳಿದ ಶೇ.90 ರಷ್ಟು ಶ್ರಮ ಹಾಗೂ ಸಮಯವನ್ನು ಪೋಷಕರು ಮಕ್ಕಳ ಕಲಿಕೆಗೆ ಕೊಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಕಲಿಕಾ ನ್ಯೂನತೆಯನ್ನು ಸರಿಪಡಿಸಿ ಮಕ್ಕಳ ಸಾಮರ್ಥ್ಯ ಹೆಚ್ಚಿಸಿದರೆ ಅದುವೇ ಸಮಾಜಕ್ಕೆ ನಾವು ನೀಡುವ ಬೆಳಕಾಗಿದೆ ಎಂದು ಫ್ರೌಶರ್ ಸೆನ್ಸಾರ್ ಟೆಕ್ನಾಲಜಿ ಇಂಡಿಯಾದ ಮುಖ್ಯಸ್ಥ ಅಲೋಕ್ ಸಿನ್ಹಾ ತಿಳಿಸಿದರು.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ (ಆಯಿಷ್) ಫ್ರೌಶರ್ ಸೆನ್ಸಾರ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ. ವತಿಯಿಂದ ಶ್ರವಣ ಸಾಧನಗಳನ್ನು ವಿತರಿಸಿ ಮಾತನಾಡಿದ ಅವರು, ವಾಕ್ ಮತ್ತು ಶ್ರವಣ ಸಮಸ್ಯೆಯನ್ನು ಎದುರಿಸುತ್ತಿರುವ ಮಕ್ಕಳಿಗೆ ನೆರವಾಗಲು ಆಯಿಷ್ ಜೊತೆ ಸದಾ ನಾವು ಇರುತ್ತೇವೆ. ನಮ್ಮ ಕಾಣಿಕೆ ಅತ್ಯಲ್ಪ. ಮಾನವೀಯತೆ ಗೆಲ್ಲಿಸಲು ಪ್ರತಿಯೊಬ್ಬರ ಕೊಡುಗೆ ಇದೆ ಎಂದರು.

ಎಲ್ಲಾ ಮಕ್ಕಳಿಗಿಂತ ದಿವ್ಯಾಂಗರಿಗೂ ಸಮಾನ ಅವಕಾಶ ಸಿಗಬೇಕು. ಪೋಷಕರು ಆರಂಭದ ಈ ಕಠಿಣ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿ, ಮಕ್ಕಳನ್ನು ಉನ್ನತ ಸ್ಥಾನಗಳತ್ತ ಒಯ್ಯಲು, ಸ್ವಾವಲಂಬಿ ಜೀವನ ರೂಪಿಸಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ವಾಕ್ ಥೆರಪಿಗೆ ಬರಬೇಕು:

ಆಯಿಷ್ ನಿರ್ದೇಶಕಿ ಡಾ.ಎಂ. ಪುಷ್ಪಾವತಿ ಮಾತನಾಡಿ, ಶ್ರವಣ ದೋಷಕ್ಕೆ ಔಷಧ, ಶಸ್ತ್ರಚಿಕಿತ್ಸೆ ಎಂಬುದಿಲ್ಲ. ಕನ್ನಡಕವನ್ನು ಹಾಕುವಂತೆಯೇ ಶ್ರವಣ ಸಾಧನಗಳನ್ನು ಬಳಸಲೇ ಬೇಕು. ಶ್ರವಣ ಸಾಧನ ಬಳಸುವಾಗ ಎಲ್ಲಾ ಶಬ್ಧಗಳೂ ಕೇಳಿಸುತ್ತವೆ. ಅರ್ಥ ಮಾಡಿಕೊಳ್ಳಬೇಕೆಂದರೆ ವಾಕ್ ಥೆರಪಿಗೆ ಬರಬೇಕು ಎಂದರು.

ಮಕ್ಕಳ ಕಲಿಕೆಗೆ ಶೇ.10 ರಷ್ಟು ಸಹಾಯವನ್ನು ಶ್ರವಣ ಸಾಧನ ಮಾಡಲಿದೆ. ಉಳಿದ ಶೇ.90 ರಷ್ಟು ಶ್ರಮ ಹಾಗೂ ಸಮಯವನ್ನು ಪೋಷಕರು ಮಕ್ಕಳ ಕಲಿಕೆಗೆ ಕೊಡಬೇಕು. ಜೀವನದಲ್ಲಿ ಕಷ್ಟಗಳು ಇದ್ದದ್ದೇ. ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸರ್ಕಾರವು ನೆರವು ನೀಡಿದೆ. ಇಲ್ಲಿಯೇ ಉಳಿದುಕೊಂಡು ತರಬೇತಿ ಪಡೆಯಬೇಕು. 2- 3 ವರ್ಷದಲ್ಲಿ ಮಕ್ಕಳು ಸಾಮಾನ್ಯರಂತೆಯೇ ಕಲಿಯಲಿದ್ದಾರೆ. ಎಲ್ಲರೂ ತರಬೇತಿಯಲ್ಲಿ ಪಾಲ್ಗೊಂಡು ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ನಿರೂಪಿಸಬೇಕು ಎಂದು ಅವರು ಸಲಹೆ ನೀಡಿದರು.ಡೆಲ್ಚವಾಕ್ಸ್ ಕಂಪನಿ ಸಿಇಒ ಗೈ ಟಾಲ್ಬೌವಾರ್ಡೆಟ್, ಫ್ರೌಶರ್ ಸಮೂಹ ಸಂಸ್ಥೆಗಳ ಸಿಇಒ ಮೈಕಲ್ ಥಾಯ್ಲ್, ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ಯಾದವ್, ಆಯಿಷ್ ಶ್ರವಣ ವಿಭಾಗದ ಮುಖ್ಯಸ್ಥೆ ಡಾ.ಎನ್. ದೇವಿ ಇದ್ದರು. 220 ಮಂದಿಗೆ ಶ್ರವಣ ಸಾಧನ

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 220 ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಹಾಗೂ ವೃದ್ಧರಿಗೆ 29 ಸಾವಿರ ರೂ. ವೆಚ್ಚದ ಶ್ರವಣ ಸಾಧನವನ್ನು ಫ್ರೌಶರ್ ಸೆನ್ಸಾರ್ ಟೆಕ್ನಾಲಜಿ ಆಫ್ ಇಂಡಿಯಾ ಸಹಯೋಗದಲ್ಲಿ ನೀಡಲಾಯಿತು. ಒಂದು ಶ್ರವಣ ಸಾಧನ ಉಚಿತವಾಗಿ ಸಿಕ್ಕರೆ, ಇನ್ನೊಂದಕ್ಕೆ ಆಯಿಷ್ ಶೇ.60 ರಿಯಾಯಿತಿ ನೀಡಿತ್ತು. 3 ಸಾವಿರ ರೂ. ರಿಯಾಯಿತಿಯಲ್ಲಿ ಪಡೆದರು.