ರಾಮನಗರ: ರಾಮನಗರ ಕ್ಷೇತ್ರ ವ್ಯಾಪ್ತಿಯಲ್ಲಿ 300 ಎಕರೆ ಭೂಮಿ ಗುರುತಿಸಿದ್ದು, 10 ಸಾವಿರ ಕಡು ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು

ರಾಮನಗರ: ರಾಮನಗರ ಕ್ಷೇತ್ರ ವ್ಯಾಪ್ತಿಯಲ್ಲಿ 300 ಎಕರೆ ಭೂಮಿ ಗುರುತಿಸಿದ್ದು, 10 ಸಾವಿರ ಕಡು ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ತಾಲೂಕಿನ ಹರೀಸಂದ್ರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹರೀಸಂದ್ರ ಗ್ರಾಪಂ ವ್ಯಾಪ್ತಿಯ ಪಾದರಹಳ್ಳಿ, ಬೆಜ್ಜರಹಳ್ಳಿ ಕಟ್ಟೆ ಬಳಿ ಒಟ್ಟು 6 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಸೂರು ಇಲ್ಲದ ಬಡವರನ್ನು ಈಗಾಗಲೇ ಪಟ್ಟಿ ಸಿದ್ದ ಪಡಿಸಲಾಗಿದ್ದು, ಅರ್ಹರಿಗೆ ಸರ್ಕಾರದ ಮಾನದಂಡ ದಂತೆ ಹಂಚಿಕೆ ಮಾಡಲಾಗುವುದು. ಈ ಕಾರ್ಯದಲ್ಲಿ ಬಡವರನ್ನು ಗುರುತಿಸುವಾಗ ಅಧಿಕಾರಿಗಳು ತಮ್ಮ ಮನದ ಅತಃಕರಣವನ್ನು ಪ್ರದರ್ಶಿಸಬೇಕಿದೆ ಎಂದರು.

ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ‌ ಜಾಗದಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು, ಅವರಿಗೆ ಸೂಕ್ತ ದಾಖಲೆಗಳಿಲ್ಲ. ಅಂತವರಿಗೆ ಹಕ್ಕು ಕೊಡುವ ಕೆಲಸ ಮಾಡಲಾಗುವುದು. ಮೂರ್ನಾಲ್ಕು ತಿಂಗಳಲ್ಲಿ ಕಸಬಾ, ಕೈಲಾಂಚ ಹೋಬಳಿಗಳ ಎಲ್ಲ ಹಳ್ಳಿಗಳ ಪ್ರತಿ ಮನೆ‌ ಮನೆಗೆ 280 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಬಹುಮುಖ್ಯವಾಗಿ ಹಲವು ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬರುತ್ತಿರುವ ಸಾಗುವಳಿ ಭೂಮಿಗೆ ಸಿ.ಎಂ.ಲಿಂಗಪ್ಪ ಹೊರತು ಪಡಿಸಿ ಈ ಹಿಂದೆ ಶಾಸಕರಾದವರು ಬಗರ್ ಹುಕ್ಕುಂ ಸಾಗುವಳಿ ಸಮಿತಿ ಸಭೆ ನಡೆಸಿ ರೈತರ ಭೂಮಿಗೆ ಹಕ್ಕು ನೀಡದ ಪರಿಣಾಮ ನನಗೆ ಆ ವಿಷಯದಲ್ಲಿ ಹೆಚ್ವಿನ ಜವಾಬ್ದಾರಿಯಿದೆ. ಈಗಾಗಲೇ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಅರ್ಜಿ ವಿಲೇವಾರಿಗೆ ಕ್ರಮ ವಹಿಸಿದ್ದೇನೆ‌. ಇದರಲ್ಲಿ ಅಧಿಕಾರಿಗಳು ನನಗೆ ಸಹಕಾರ ಕೊಟ್ಟಿದ್ದು, ಎಲ್ಲ ಇಲಾಖಾ ಅಧಿಕಾರಿಗಳು ತಮ್ಮ ಪರಿಮಿತಿಯಲ್ಲಿ ಸರ್ಕಾರದ ಸವಲತ್ತುಗಳು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದರು.

ಯೋಜನೆಗಳ ಸಾಕಾರ :

ಕಾಳೇಗೌಡನದೊಡ್ಡಿ ಬಳಿ 28 ಕೋಟಿ ರೂ ವೆಚ್ಚದ ಏತ ನೀರಾವರಿ ಯೋಜನೆ, ಸುಗ್ಗನಹಳ್ಖಿ, ಗದಗಯ್ಯನ ದೊಡ್ಡಿ ಬಳಿ ಸೇತುವೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಹರಿಸಂದ್ರ - ತಿಮ್ಮೇಗೌಡನದೊಡ್ಡಿ ನಡುವೆ 10 ಕೋಟಿ ರು. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾರ್ಯ ಟೆಂಡರ್ ಹಂತದಲ್ಲಿದೆ. 70 ಕೋಟಿ ವೆಚ್ಚದ ಮಂಚನಬೆಲೆ ಎಡ ಬಲ ದಂಡೆ ನಾಲೆಗಳ ಆಧುನೀಕರಣ ಸೇರಿದಂತೆ ಕಸಬಾ ಹೋಬಳಿಯಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳು, ಹೈ‌ಮಾಸ್ ದೀಪ ಅಳವಡಿಸುವ ಕೆಲಸಗಳನ್ನು ಮಾಡಿದ್ದು, ಜನರ ಬಹುದಿನಗಳ ಸಮಸ್ಯೆಗಳಿಗೆ ಮುಕ್ತಿ ನೀಡಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಹೆಚ್.ರಾಜು, ತಹಸೀಲ್ದಾರ್ ತೇಜಸ್ವಿನಿ, ಪಿಡಿಓ ದಯಾನಂದ್, ಬಿಇಒ ಸೋಮಲಿಂಗಯ್ಯ ಅಧಿಕಾರಿಗಳಾದ ನೂತನ್, ಕೃಷ್ಣಮೂರ್ತಿ, ರವಿಕುಮಾರ್, ರಘು, ಲಾವಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.