ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣದ ವೇಳೆ ಅನೇಕರು ಮನೆ ಕಳೆದುಕೊಂಡಿದ್ದು, ಕೆಲವೊಂದು ಕಾರಣಗಳಿಂದ ಅವರಿಗೆ ನಿವೇಶನ ನೀಡಲು ತಡವಾಗಿತ್ತು. ಇದೀಗ ಮೊದಲ ಹಂತದಲ್ಲಿ ಫೆ.12ರಂದು 54 ಮಂದಿಗೆ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಯೋಜನೆಯ ಸಭೆಯಲ್ಲಿ ಮಾತನಾಡಿದ ಅವರು, ಗುಡಿಬಂಡೆ ಮುಖ್ಯ ರಸ್ತೆಯನ್ನು ಅಗಲೀಕರಣ ವೇಳೆ ಅನೇಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಸದ್ಯರಾಜೀವ್ ಗಾಂಧಿ ವಸತಿ ನಿಗಮದಿಂದ 54 ಮಂದಿ ಫಲಾನುಭವಿಗಳಿಗೆ ನಿವೇಶನ ನೀಡಲು ಹಕ್ಕು ಪತ್ರ ನೀಡಲಾಗುವುದು ಎಂದರು.
ಮನೆ ಕಳೆದುಕೊಂಡ ಸಂತ್ರಸ್ತರುಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣದ ವೇಳೆ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಮೊದಲ ಹಂತವಾಗಿ ಈ 54 ಸೈಟ್ ಗಳ ಹಕ್ಕು ಪತ್ರಗಳನ್ನು ನೀಡಲಾಗುತ್ತದೆ. ಸದ್ಯ ಸಿದ್ಧವಾಗಿರುವ ಪಟ್ಟಿಯಲ್ಲಿ ಯಾರಾದರೂ ನಿವೇಶನ ಕಳೆದುಕೊಂಡವರಿಲ್ಲದೇ ಬೇರೆಯವರಿದ್ದರೆ ಅಂತಹವರನ್ನು ಪತ್ತೆ ಮಾಡಿ ಪಟ್ಟಿಯಿಂದ ತೆಗೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಉಳಿದವರಿಗೂ ಸಹ ಶೀಘ್ರದಲ್ಲೇ ನಿವೇಶನ ನೀಡುವ ಕೆಲಸವಾಗಲಿದೆ ಎಂದರು.
ಈಗಾಗಲೇ ತಾಲೂಕಿನ ಪಲೈಗಾರಹಳ್ಳಿ ಬಳಿ 5 ಎಕರೆ ಜಮೀನಿನಲ್ಲಿ ನಿವೇಶನ ನೀಡಲು ಕೆಲಸಗಳು ನಡೆಯುತ್ತಿವೆ. ಅಲ್ಲಿ ಸುಮಾರು 157 ಸೈಟ್ ಗಳು ಸಿಗಲಿದ್ದು, ಇವುಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ ಎಂದರು.ಆಶ್ರಯ ಸಮಿತಿಯ ಸದಸ್ಯರಾದ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಪ.ಪಂ ಮುಖ್ಯಾಧಿಕಾರಿ ಸಭಾ ಶರೀನ್, ಪಟ್ಟಣ ಪಂಚಾಯತಿ ಅಧ್ಯಕ್ಷ ವಿಕಾಸ್, ನಿರ್ಮಲಮ್ಮ, ಬಿ.ಮಂಜುನಾಥ್, ನಾಗರಾಜ್, ಫಯಾಜ್ ಸೇರಿದಂತೆ ಹಲವರು ಇದ್ದರು. .