ಸಾರಾಂಶ
ಚೆನ್ನಗಿರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ ಪತ್ರಕರ್ತರ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬುಧುವಾರ ಇಲ್ಲಿನ ಪತ್ರಿಕಾ ಭವನದಿಂದ ತಾಲೂಕು ಕಚೇರಿಯವರೆಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ವಿ.ಲಿಂಗರಾಜು ಮಾತನಾಡಿ, ಸರ್ಕಾರದ ವತಿಯಿಂದ ಜಿಲ್ಲಾ ಮತ್ತು ರಾಜ್ಯಮಟ್ಟದ ಎಸ್‌ಸಿ ಮತ್ತು ಎಸ್‌ಟಿ ಪತ್ರಕರ್ತರಿಗೆ ವಾರ್ತಾ ಇಲಾಖೆಯ ವತಿಯಿಂದ ಮೀಡಿಯಾ ಕಿಟ್ ವಿತರಿಸುತ್ತೀರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಎಲ್ಲಾ ವರ್ಗದ ಪತ್ರಕರ್ತರು ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದು ಪತ್ರಕರ್ತರಲ್ಲಿ ವರ್ಗದ ತಾರತಮ್ಯಗಳನ್ನು ಮಾಡದೆ ಎಲ್ಲಾ ವರ್ಗದ ಪತ್ರಕರ್ತರಿಗೂ ಮಿಡಿಯಾ ಕಿಟ್ ವಿತರಣೆ ಮಾಡಬೇಕು ಎಂದು ಹೇಳಿದರು.ಇತ್ತೀಚೆಗೆ ಸರ್ಕಾರದ ವತಿಯಿಂದ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಿಸುವ ಯೋಜನೆ ಕಾರ್ಯರೂಪಕ್ಕೆ ತಂದಿದ್ದು, ಇದಕ್ಕಿರುವ ಷರತ್ತುಗಳನ್ನು ಸಡಿಲಗೊಳಿಸಿ ರಾಜ್ಯದ ಎಲ್ಲಾ ಪತ್ರಕರ್ತರಿಗೂ ಬಸ್ ಪಾಸ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ನ್ಯಾಯದಪರ ಹೋರಾಡುತ್ತೀರುವ ಪತ್ರಕರ್ತರು ಅಕಸ್ಮಿಕವಾಗಿ ಮರಣ ಹೊಂದಿದವರಿಗೆ ಕನಿಷ್ಠ 25ಲಕ್ಷ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಈ ಸಂಧರ್ಭದಲ್ಲಿ ಪತ್ರಕರ್ತರಾದ ಎಚ್.ವಿ.ನಟರಾಜ್, ಸತೀಶ್ ಎಂ.ಪವಾರ್, ಮಹಾರುದ್ರಪ್ಪ, ಸಂತೋಷ್, ಶ್ರೀನಿವಾಸ್ ಮಹೇಶ್, ಎಸ್.ಜೆ.ಕಿರಣ್, ದೇವರಾಜ್, ರಘುಪ್ರಸಾದ್, ಸುಮುಖ್ ಎಸ್.ಪವಾರ್, ಕೆ.ಪಿ.ಎಂ.ಸ್ವಾಮಿ, ಅಣ್ಣಪ್ಪ ಹಾಜರಿದ್ದರು.