ಸಾರಾಂಶ
ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಡೆಂಘಿ ತಡೆಗಟ್ಟುವ ಮುಂಜಾಗ್ರತೆ ಹಿನ್ನೆಲೆಯಲ್ಲಿ ಸೊಳ್ಳೆ ಪರದೆಗಳನ್ನು ವಿತರಣೆ ಮಾಡಲಾಯಿತು. ಸ್ವಚ್ಛತೆ ಮತ್ತು ಡೆಂಘಿ ತಡೆಗಟ್ಟುವ ಕುರಿತಾಗಿ ಗಣ್ಯರು ಈ ಸಂದರ್ಭ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸಮೀಪದ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆ ವತಿಯಿಂದ ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಡೆಂಘಿ ತಡೆಗಟ್ಟುವ ಮುಂಜಾಗ್ರತೆ ಹಿನ್ನೆಲೆಯಲ್ಲಿ ಸೊಳ್ಳೆ ಪರದೆಗಳನ್ನು ವಿತರಣೆ ಮಾಡಲಾಯಿತು.ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಸೊಳ್ಳೆ ಪರದೆ ವಿತರಣೆ ಕಾರ್ಯಕ್ರಮದಲ್ಲಿ ರೋಟರಿ ಮಲ್ಲೇಶ್ವರ ಸಂಸ್ಥೆಯ ಅಧ್ಯಕ್ಷ ದಯಾನಂದ್ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜ ಸೇವೆಯ ಜೊತೆಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.
ಸಾಮಾಜಿಕ ಕಳಕಳಿ ಇರುವ ಉದ್ದೇಶದಿಂದ ರೋಟರಿ ಸಂಸ್ಥೆ ಶಿಕ್ಷಣ, ಆರೋಗ್ಯ, ಅರಣ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಈ ಮೂಲಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆಯನ್ನು ಮಾಡುತ್ತಿದೆ. ಆರೋಗ್ಯ ಸ್ವಚ್ಛತೆ ಹಿತದೃಷ್ಟಿಯಿಂದ ಮತ್ತು ಡೆಂಘಿ ತಡೆಗಟ್ಟುವ ಉದ್ದೇಶದಿಂದ ರೋಟರಿ ಸಂಸ್ಥೆ ವತಿಯಿಂದ ನಮ್ಮ ವ್ಯಾಪ್ತಿಯ ಎಲ್ಲ ಅಂಗನವಾಡಿಗಳಿಗೆ ಸೊಳ್ಳೆ ಪರದೆಗಳನ್ನು ವಿತರಣೆ ಮಾಡಲಾಗಿದೆ ಎಂದರು.ಈ ಸಂದರ್ಭ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಅವರು ಸ್ವಚ್ಛತೆ ಮತ್ತು ಡೆಂಘಿ ತಡೆಗಟ್ಟುವ ಕುರಿತಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಮಲ್ಲೇಶ್ವರ ಸಂಸ್ಥೆ ಕಾರ್ಯದರ್ಶಿ ಎಚ್.ಇ.ಕಿರಣ್, ರೋಟರಿ ಸದಸ್ಯರಾದ ಎ.ಎಸ್.ರಾಮಣ್ಣ, ಉದಯಕುಮಾರ್, ಎ.ಜೆ.ವಿಜಯ್, ಎಂ.ವಿ.ವೆಂಕಟೇಶ್, ಮನೋಹರ್, ಲೋಕೇಶ್, ಸಂಪತ್, ನಾರಾಯಣ ಸ್ವಾಮಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಸುತ್ತಮುತ್ತಲಿನ ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರು ಹಾಜರಿದ್ದರು.