ಎಂಡೋ ಸಂತ್ರಸ್ತ ರೋಗಿಗಳಿಗೆ ಎಂಆರ್‌ಪಿಎಲ್‌ ಕಿಟ್‌ ವಿತರಣೆ

| Published : Jul 05 2024, 12:52 AM IST

ಸಾರಾಂಶ

ಈ ಕಿಟ್‌ನಲ್ಲಿ ಫಿನಾಯಿಲ್, ಬ್ರೆಶ್, ಸೋಪ್ ಮತ್ತಿತರ ದಿನಬಳಕೆ ವಸ್ತುಗಳು ಮತ್ತು ರೋಗಿಗಳ ಆರೋಗ್ಯ ವೃದ್ದಿಗಾಗಿ ಗೇರುಬೀಜ, ಬಾದಾಮ್ ಮತ್ತಿತರ ಪೌಷ್ಟಿಕ ಆಹಾರಗಳು ಒಳಗೊಂಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಜುಲೈ 1 ರಿಂದ 15 ರವರೆಗೆ ಎಂಆರ್‌ಪಿಎಲ್‌ ಆಚರಿಸುತ್ತಿರುವ ಸ್ವಚ್ಛತಾ ಪಾಕ್ಷಿಕದ ಅಂಗವಾಗಿ ಆರೋಗ್ಯ ಸುರಕ್ಷಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಮೂಡುಬಿದಿರೆ ತಾಲೂಕಿನಲ್ಲಿ ಎಂಡೋಸಲ್ಫಾನ್‌ನಿಂದ ಹಾಸಿಗೆ ಹಿಡಿದ ರೋಗಿಗಳಿಗೆ ದಿನಬಳಕೆಯ ಮತ್ತು ಪೌಷ್ಠಿಕ ಆಹಾರದ ಕಿಟ್‌ ವಿತರಿಸಲಾಯಿತು. ಮೂಡುಬಿದಿರೆಯ ಮಾರೂರು, ಕಲ್ಲಬೆಟ್ಟು ನೀರಳಿಕೆಯ ಹಲವು ಕುಟುಂಬಗಳಿಗೆ ಕಿಟ್‌ ವಿತರಿಸಲಾಯಿತು.

ಎಂಆರ್‌ಪಿಎಲ್‌ ಸಂಸ್ಥೆಯ ಸಿಎಸ್‌ಆರ್‌ನ ಜನರಲ್ ಮೆನೇಜರ್‌ ಪ್ರಶಾಂತ್ ಬಾಳಿಗಾ ಮಾತನಾಡಿ, ನಮ್ಮ ಸಂಸ್ಥೆ ಪ್ರತೀವರ್ಷ ಸ್ವಚ್ಛತಾ ಅಭಿಯಾನದ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಒಂದು ಭಾಗವಾಗಿ ಎಂಡೋಸಲ್ಫಾನ್‌ ಪೀಡಿತರಾಗಿದ್ದು ಮಲಗಿದಲ್ಲೇ ಇರುವ ರೋಗಿಗಳಿಗೆ ದಿನಬಳಕೆ ಮತ್ತು ಪೌಷ್ಟಿಕ ಆಹಾರದ ಕಿಟ್‌ ನೀಡುತ್ತಿದ್ದೇವೆ. ಜಿಲ್ಲೆಯಲ್ಲಿ ಹಲವಾರು ಮಂದಿ ಎಂಡೋಸಲ್ಫಾನ್ ಸಂತ್ರಸ್ಥರಿದ್ದು ಇದರಲ್ಲಿ ಗಂಭೀರ ಪರಿಸ್ಥಿತಿ ಅಂದರೆ ಮಲಗಿದಲ್ಲೇ ಇರುವ ರೋಗಿಗಳಿಗೆ ಕಿಟ್‌ ವಿತರಿಸುತ್ತಿದ್ದೇವೆ. ಈ ಕಿಟ್‌ನಲ್ಲಿ ಫಿನಾಯಿಲ್, ಬ್ರೆಶ್, ಸೋಪ್ ಮತ್ತಿತರ ದಿನಬಳಕೆ ವಸ್ತುಗಳು ಮತ್ತು ರೋಗಿಗಳ ಆರೋಗ್ಯ ವೃದ್ದಿಗಾಗಿ ಗೇರುಬೀಜ, ಬಾದಾಮ್ ಮತ್ತಿತರ ಪೌಷ್ಟಿಕ ಆಹಾರಗಳು ಒಳಗೊಂಡಿದೆ. ಕಳೆದ ಬಾರಿಯೂ ಇಂತಹ ಕಿಟ್‌ ವಿತರಿಸಲಾಗಿದ್ದು ಮಾತ್ರವಲ್ಲದೆ ಸಂಸ್ಥೆಯು ಹಲವಾರು ಸಾಮಾಜಿಕ ಕಾರ್ಯಗಳನ್ನು ನಿರಂತರ ಮಾಡುತ್ತಿದೆ ಎಂದರು.ಎಂಡೋಸಲ್ಪಾನ್ ನೋಡೆಲ್ ಅಧಿಕಾರಿ ಡಾ.ನವೀನ್ ಚಂದ್ರ ಮಾತನಾಡಿ, ಪ್ರತೀ ವರ್ಷ ಎಂಆರ್‌ಪಿಎಲ್‌ ಸಂಸ್ಥೆ ಎಂಡೋಸಲ್ಪಾನ್ ಸಂತ್ರಸ್ತರಿಗೆ ದಿನಬಳಕೆ ಕಿಟ್‌ ವಿತರಿಸುತ್ತಿದ್ದು, ಕಳೆದ ಬಾರಿಯೂ ನೀಡಿದ್ದಾರೆ. ಇಂತಹ ಸಮಾಜ‌ಮುಖಿ‌ ಕಾರ್ಯ ಅಭಿನಂದನೀಯ ಎಂದರು.

ಈ ಸಂದರ್ಭ ಎಂಆರ್‌ಪಿಎಲ್‌ ಅಧಿಕಾರಿ ಸ್ಟೀವನ್ ಪಿಂಟೋ , ಆರೋಗ್ಯಾಧಿಕಾರಿಗಳು ಇದ್ದರು.