ಉಚಿತ ಕೊಳವೆಬಾವಿ ನಿರ್ಮಾಣಕ್ಕೆ ಆದೇಶ ಪತ್ರಗಳನ್ನು ಶಾಸಕ ಡಾ. ಮಂತರ್ ಗೌಡ ತಮ್ಮ ಕಚೇರಿ ಎದುರು ವಿತರಿಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಣ್ಣ ನೀರಾವರಿ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೃಷಿಕರಿಗೆ ರೂ. 5ಲಕ್ಷ ವೆಚ್ಚದ ಉಚಿತ ಕೊಳವೆಬಾವಿ ನಿರ್ಮಾಣಕ್ಕೆ ಆದೇಶ ಪತ್ರಗಳನ್ನು ಶಾಸಕ ಡಾ. ಮಂತರ್ ಗೌಡ ಸೋಮವಾರ ತಮ್ಮ ಕಚೇರಿ ಎದುರು ವಿತರಿಸಿದರು.ನಂತರ ಮಾತನಾಡಿ, ಚಿಕ್ಕ ರೈತರು ನೀರಾವರಿಯೊಂದಿಗೆ ಕೃಷಿ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ. ಕಳೆದ 5 ವರ್ಷಗಳಿಂದ ಯಾವುದೇ ಯೋಜನೆ ಜಿಲ್ಲೆಗೆ ಬಂದಿರಲಿಲ್ಲ. ಈ ಭಾರಿ ಕ್ಷೇತ್ರದ 50 ಕೃಷಿಕರಿಗೆ ಮಾತ್ರ ಯೋಜನೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ50 ಕೃಷಿಕರಿಗೆ ಕೊಳವೆಬಾವಿ ಯೋಜನೆ ನೀಡಲಾಗುವುದು. ಇದರಲ್ಲಿ ಕನಿಷ್ಟ ಅರ್ಧ ಎಕರೆ ಕೃಷಿ ಭೂಮಿಯನ್ನು ರೈತರು ಹೊಂದಿರಬೇಕು. ಬೇರಾವುದೇ ಯೋಜನೆಯಲ್ಲಿ ಕೊಳವೆಬಾವಿ ಪಡೆದಿರಬಾರದು ಎಂದರು.ಯಾವುದೇ ರೈತರು ಕೊಳವೆಬಾವಿ ತೆಗೆಸಲು ಅಧಿಕಾರಿಗಳಿಗೆ ಹಣ ನೀಡುವುದು ಬೇಡ. ಮುಂದಿನ ಒಂದು ತಿಂಗಳಿನ ಒಳಗೆ ಎಲ್ಲ ಕೊಳವೆಬಾವಿಗಳನ್ನು ಕೊರೆಸಿ, ಮೋಟಾರ್ ಅಳವಡಿಸಿ, ವಿದ್ಯುತ್ ಸಂಪರ್ಕ ನೀಡುವ ಕೆಲಸವನ್ನು ಇಲಾಖಾಧಿಕಾರಿ ಕುಮಾರಸ್ವಾಮಿ ಮಾಡಿಸಬೇಕು. ಪ್ರತಿ ಬಾವಿಯನ್ನು 400 ಅಡಿಯವರೆಗೆ ಕೊರೆಸಲು ಅವಕಾಶ ಇದ್ದು, ಚೆನ್ನಾಗಿ ನೀರು ಸಿಗುವ ತನಕ ಕೊರೆಸಲು ರೈತರು ಮುಂದಾಗಬೇಕು. ಎಲ್ಲರೂ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಬಿ.ಬಿ. ಸತೀಶ್, ಜೆ.ಜೆ. ಜನಾರ್ಧನ, ಜಿಲ್ಲಾ ಕೆಡಿಪಿ ಸಮಿತಿ ಸದಸ್ಯ ಎಚ್.ಆರ್. ಸುರೇಶ್ ಇದ್ದರು.