ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಸಬ್ಸಿಡಿ ಪತ್ರ ವಿತರಣೆ

| Published : Aug 29 2024, 12:48 AM IST

ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಸಬ್ಸಿಡಿ ಪತ್ರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ’ ಯೋಜನೆಯ 100ನೇ ಫಲಾನುಭವಿಯಾದ ಶಕ್ತಿನಗರದ ಡಾ. ಸುಧಾಕರ್ ಕುಟುಂಬಕ್ಕೆ 78 ಸಾವಿರ ರು. ಸಬ್ಸಿಡಿ ಪತ್ರವನ್ನು ಹಸ್ತಾಂತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ’ (ಪಿಎಂ ಸೂರ್ಯ ಗೃಹ- ಉಚಿತ ವಿದ್ಯುತ್) ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅನುಷ್ಠಾನಗೊಂಡಿದ್ದು, ಈ ಯೋಜನೆಯ ಫಲಾನುಭವಿಗೆ ಮಂಗಳೂರಿನಲ್ಲಿ ಸೋಮವಾರ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಬ್ಸಿಡಿ ಪತ್ರ ವಿತರಿಸಿದರು.

ಇನರ್ಜಿಯ ಸೋಲಾರ್ ಕಂಪೆನಿ ಸಹಯೋಗದಲ್ಲಿ ಅನುಷ್ಠಾನಗೊಂಡಿರುವ ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ’ ಯೋಜನೆಯ 100ನೇ ಫಲಾನುಭವಿಯಾದ ಶಕ್ತಿನಗರದ ಡಾ. ಸುಧಾಕರ್ ಕುಟುಂಬಕ್ಕೆ 78 ಸಾವಿರ ರು. ಸಬ್ಸಿಡಿ ಪತ್ರವನ್ನು ಹಸ್ತಾಂತರ ಮಾಡಿದರು.

ಈ ವೇಳೆ ಮಾತನಾಡಿದ ಕ್ಯಾ.ಚೌಟ, ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯಲ್ಲಿ ಭಾರತ ಕಾಂತ್ರಿ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಯೋಜನೆ ಕುಟುಂಬವನ್ನು ವಿದ್ಯುತ್ ಬಳಕೆ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಈ ಯೋಜನೆ ಮೂಲಕ ಅಗತ್ಯವಿರುವ ವಿದ್ಯುತ್‌ನ್ನು ಉತ್ಪಾದಿಸಿ ಬಳಸುವ ಜತೆಗೆ ಉಳಿದ ಯುನಿಟ್‌ಗಳನ್ನು ಮಾರಾಟ ಮಾಡಬಹುದು. ಇದು ಕರ್ನಾಟಕದಲ್ಲಿ ಇರುವಂತೆ ಹಣ ಕೊಟ್ಟು ಪಡೆಯುವ ಗ್ಯಾರಂಟಿಯಲ್ಲ. ಹಣ ಸಂಪಾದನೆ ಮಾಡಿ ತಮ್ಮ ಬದುಕಿಗೆ ಗ್ಯಾರಂಟಿ ಪಡೆಯುವಂಥ ಯೋಜನೆಯಾಗಿದೆ ಎಂದು ಹೇಳಿದರು.

ಇಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಮೊದಲು ಒಂದು ಗ್ರಾಮ, ವಾರ್ಡ್ ಅಥವಾ ಬೂತ್ ಮಟ್ಟದಲ್ಲಿ ಮಾದರಿಯಾಗಿ ಅನುಷ್ಠಾನಗೊಳಿಸಬೇಕು. ಸಣ್ಣ ಪ್ರದೇಶದಲ್ಲಿ ಅನುಷ್ಠಾನ ಪ್ರಕ್ರಿಯೆ ಸುಲಭವಾಗುತ್ತದೆ. ಇದರಿಂದ ಮುಂದೆ ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಅನುಕೂಲವಾಗುವ ಜತೆಗೆ ಪ್ರೇರಣೆ ನೀಡುತ್ತದೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಒಂದು ಬೂತ್ ಅಥವಾ ವಾರ್ಡ್ ನಲ್ಲಿ ಈ ಯೋಜನೆಗಳನ್ನು ಅನುಷ್ಠಾನಗೊಳಿಸಿ ಮಾದರಿಯನ್ನಾಗಿ ರೂಪಿಸುವುದಕ್ಕೆ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಶಾಸಕ ವೇದವ್ಯಾಸ್ ಕಾಮತ್, ಪಾಲಿಕೆ ಸದಸ್ಯೆ ವನಿತಾ ಪ್ರಸಾದ್, ಇನರ್ಜಿಯ ಕಂಪೆನಿಯ ಅರವಿಂದ್, ಸೂರಜ್ ಶೆಟ್ಟಿ ಇದ್ದರು.

ಏನಿದು ಪಿಎಂ ಸೂರ್ಯ ಘರ್ ಯೋಜನೆ?

ಈ ಯೋಜನೆಯಡಿ ಜನರಿಗೆ ತಮ್ಮ ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು 78 ಸಾವಿರ ರು.ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಇದರ ಫಲಾನುಭವಿಗಳು ಉತ್ಪತ್ತಿಯಾದ ವಿದ್ಯುತ್‌ನ್ನು ಬಳಕೆ ಮಾಡಿಕೊಂಡು ಉಳಿದ ಯೂನಿಟ್‌ಗಳನ್ನು ವಿತರಣಾ ಸಂಸ್ಥೆಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸಬಹುದು.