ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ 1.5 ಲಕ್ಷ ರು. ಸಹಾಯಧನದ ಚೆಕ್ ವಿತರಣೆ

| Published : Aug 03 2025, 01:30 AM IST

ಸಾರಾಂಶ

ದೇವಾಲಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಚತುರ್ದಾನ ಧರ್ಮಗಳಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ನೀಡಿರುವ ಸಹಾಯ ಧನವನ್ನು ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಅಳಿಸಂದ್ರ ಗ್ರಾಮದ ಶ್ರೀಕೊಲ್ಲಾಪುರದಮ್ಮದೇವಿ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 1.5 ಲಕ್ಷ ರು. ಸಹಾಯಧನದ ಚೆಕ್ ವಿತರಿಸಲಾಯಿತು.

ಸಂಸ್ಥೆ ತಾಲೂಕು ಯೋಜನಾಧಿಕಾರಿ ದಿವಾಕರ್ ಮಾತನಾಡಿ, ದೇವಾಲಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಚತುರ್ದಾನ ಧರ್ಮಗಳಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ನೀಡಿರುವ ಸಹಾಯ ಧನವನ್ನು ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಅಣೆಚನ್ನಾಪುರ ಮಂಜೇಶ್ ಮಾತನಾಡಿ, ಸಂಸ್ಥೆಯಿಂದ ತಾಲೂಕಿನ 28 ದೇವಸ್ಥಾನಗಳ ಅಭಿವೃದ್ಧಿಗೆ ಶೀ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಹಾಯಧನ ರೂಪದಲ್ಲಿ ಲಕ್ಷಾಂತರ ರು. ಅನುದಾನ ನೀಡಿದ್ದಾರೆ ಎಂದರು.

ನಿರ್ಗತಿಕ ವಯೋವೃದ್ಧರಿಗೆ ಮಾಶಾಸನ, ಜಲಮಂಗಲ, ಸುಜ್ಞಾನ ನಿಧಿ, ವಿಮಾ ಕಾರ್ಯಕ್ರಮ ಸೇರಿದಂತೆ ಮಧ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಅದೆಷ್ಟೋ ಕುಟುಂಬಗಳಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿದ್ದಾರೆ ಎಂದರು.

ಜಲ ಸಂರಕ್ಷಣೆಗಾಗಿ ಕೆರೆಗಳ ಅಭಿವೃದ್ಧಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಿವಿಧ ಶಾಲಾ ಕಾಲೇಜುಗಳಿಗೆ ಉಚಿತವಾಗಿ ಅಗತ್ಯ ಪರಿಕರಗಳ ವಿತರಣೆ, ಹೈನುಗಾರಿಕೆ ಪ್ರೋತ್ಸಾಹಿಸಲು ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ಸೇರಿದಂತೆ ಗ್ರಾಮೀಣ ಪ್ರದೇಶದ ಎಲ್ಲ ವರ್ಗಗಳ ಬಡಜನರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ ಎಂದರು.

ಈ ವೇಳೆ ಸಂಸ್ಥೆ ವಲಯ ಮೇಲ್ವಿಚಾರಕ ಕಾರ್ತಿಕ್, ಸೇವಾ ಪ್ರತಿನಿಧಿ ಜಯಂತಿ, ಟ್ರಸ್ಟ್‌ನ ಖಜಾಂಚಿ ಮಂಜಣ್ಣ, ಅಪ್ಪಾಜಿಗೌಡ, ದೇವೇಗೌಡ (ಬಾಲಣ್ಣ), ಒಕ್ಕೂಟದ ಪದಾಧಿಕಾರಿಗಳಾದ ಕೆಂಪಮ್ಮ, ಬಸವರಾಜ್, ಸುಮಿತ್ರಾ ಸೇರಿದಂತೆ ಗ್ರಾಮದ ಮುಖ್ಯಸ್ಥರು ಮತ್ತು ಸ್ವಸಹಾಯ ಸಂಘದ ಸದಸ್ಯರು ಇದ್ದರು.