ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಹಲವು ವರ್ಷಗಳಿಂದ ಬಾಕಿ ಇರುವ ಏಳೂವರೆ ಸಾವಿರ ದರಕಾಸ್ತುಗಳಿಗೆ ಆರ್‌ಟಿಸಿ ಮಾಡಿಸಿ ಮುಖ್ಯಮಂತ್ರಿಗಳಿಂದ ರೈತರಿಗೆ ವಿತರಣೆ ಮಾಡಲಾಗುತ್ತದೆ. ಇದರಿಂದ ಬಹಳ ವರ್ಷಗಳ ರೈತರ ಬೇಡಿಕೆ ಈಡೇರಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದರು.ಮುಖ್ಯಮಂತ್ರಿ ಇದೇ ತಿಂಗಳು ಜಿಲ್ಲೆಗೆ ಭೇಟಿ ನೀಡುವ ಹಿನ್ನೆಲೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ನಂತರ ಮಾತನಾಡಿ, ಕಂದಾಯ ಇಲಾಖೆಯ ಸೇವೆಗಳನ್ನು ಸಾರ್ವಜನಿಕರಿಗೆ ಸಮರ್ಪಣೆ ಮಾಡಬೇಕು. ಉದ್ದೇಶದಿಂದ ಬಾಕಿ ಇರುವ ಕೆಲಸಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಬಹಳ ವರ್ಷಗಳ ಹಿಂದೆ ಫಲಾನುಭವಿಗೆ ದರಕಾಸ್ತು ಮೂಲಕ ಭೂಮಿ ಗ್ರಾಂಟ್ ಆಗಿದ್ದು, ಸರಿಯಾದ ದಾಖಲೆಗಳಿಲ್ಲದೆ ಪೋಡಿ ಬಹಳ ವರ್ಷಗಳಿಂದ ಬಾಕಿ ಉಳಿದಿದೆ. ಅದನ್ನು ಸರಿಪಡಿಸಲು ಒಂದು ದೊಡ್ಡ ಆಂದೋಲನವನ್ನು ಮಾಡುತ್ತಿದೆ ಎಂದರು.ಈ ಪೌತಿ ಆಂದೋಲನ ಸರ್ಕಾರದ ಕಂದಾಯ ಇಲಾಖೆ ಬಹಳ ದೊಡ್ಡ ಕಾರ್ಯಕ್ರಮ. ಮೂರ್ನಾಲ್ಕು ತಲೆಮಾರುಗಳಿಂದ ಪೌತಿ ಸಮಸ್ಯೆ ಇದ್ದು, ಆರ್‍ಟಿಸಿಯಲ್ಲಿ ತಾತ ಮುತ್ತಾತರ ಹೆಸರೇ ಹೋಗ್ತಾ ಇದೆ. ಅವರು ತೀರಿಕೊಂಡರೂ ಎಷ್ಟೋ ವರ್ಷಗಳಾದರೂ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಖಾತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್‌ಟಿಸಿಯಲ್ಲಿ ಹೆಸರು ಬದಲಾಗದ ಕಾರಣ ಪಿಎಂ ಕಿಸಾನ್ ಯೋಜನೆ ಸೇರಿದಂತೆ ಸರ್ಕಾರದಿಂದ ಸಿಗಬೇಕಿರೋ ಸೌಲಭ್ಯಗಳು ಸಿಗುತ್ತಿಲ್ಲ. ಅದರ ನಿವಾರಣೆಗೂ ಸಹ ದೊಡ್ಡ ಪ್ರಮಾಣದಲ್ಲಿ ಆಂದೋಲನ ಮಾಡಲಾಗುತ್ತಿದೆ ಎಂದರು.

ಬಂಗಾರಪೇಟೆ ತಾಲೂಕಿನಲ್ಲಿ ಕಂದಾಯ ಗ್ರಾಮ ಮಾಡಿ 30ಕ್ಕೂ ಹೆಚ್ಚಿನ ಹಕ್ಕು ಪತ್ರಗಳನ್ನು ಹಂಚಿಕೆ ಮಾಡಲಾಗುತ್ತದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಅರ್ಹರಿಗೆ ಪೆನ್ಷನ್ ಯೋಜನೆಗಳು ತಲುಪಿಲ್ಲ. ವಂಚಿತರಿಗೆ ಅದನ್ನು ತಲುಪಿಸಲು ಅದಾಲತ್ ಮಾಡಲು ತಹಸೀಲ್ದಾರರಿಗೆ ಸೂಚಿಸಲಾಗಿದೆ. ಮಾಜಿ ಸೈನಿಕರಿಗೆ ಸರಕಾರದ ನಿರ್ದೇಶನದಂತೆ ಸೈಟುಗಳನ್ನು ಹಂಚಿಕೆ ಮಾಡಬೇಕಿದ್ದು, ಸುಮಾರು 150 ಜನಕ್ಕೆ ಸೈಟು ಕೊಡವ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಭರವಸೆ ನೀಡಿದರು.ಯುದ್ದದ ನೆಪ ಹೇಳಿಕೊಂಡು ಯಾವುದೇ ವರ್ತಕರು ಕಾಳ ಸಂತೆಯಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ಕೃತಕ ಅಭಾವವನ್ನು ಸೃಷ್ಟಿ ಮಾಡುವಂತಿಲ್ಲ ಜೊತೆಗೆ ಅಕ್ರಮವಾಗಿ ದಸ್ತಾನು ಮಾಡುವ ಹಾಗಿಲ್ಲ. ಇದನ್ನು ಮಾನಿಟರ್ ಮಾಡಲು ತಹಸೀಲ್ದಾರ್, ಕೃಷಿ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈಗ ಸದ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಗ್ಯಾಸ್, ಪೆಟ್ರೋಲ್, ಡೀಸಲ್, ಯಾವುದಕ್ಕೂ ಅಭಾವ ಕಂಡುಬಂದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ವಿತರಕರನ್ನೆಲ್ಲಾ ಮಾತನಾಡಿದ್ದೇನೆ ಎಂದರು.

ಯುದ್ದದ ಲಾಭವನ್ನು ಪಡೆಯಲು ಕೆಲವು ಅಂಗಡಿಗಳಲ್ಲಿ ಕೃಷಿಗೆ ಸಂಬಂಧಿಸಿದ ಕೆಲವು ವಸ್ತುಗಳ ಬೆಲೆ ಜಾಸ್ತಿ ಮಾಡಿಬಿಟ್ಟಿದ್ದಾರೆ. ಜಿಲ್ಲಾ ಆಡಳಿತ ಅದನ್ನು ಸಹಿಸೋದಿಲ್ಲ. ಅಂತಹವರ ವಿರುದ್ದ ಕಾನೂನಿನ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಸದ್ಯಕ್ಕೆ ನಾಗರೀಕರು ಭಯಪಡುವ ಅವಶ್ಯಕತೆ ಇಲ್ಲ ಎಂದರು

ಈ ವೇಳೆ ಎಡಿಸಿ ಮಂಗಳಾಕ್ಷಮ್ಮ, ತಹಸೀಲ್ದಾರ್ ಕೆಎನ್ ಸುಜಾತ, ಗ್ರೇಡ್ 2 ತಹಸೀಲ್ದಾರ್ ಗಾಯತ್ರಿ, ಆರ್‌ಎಫ್‍ಒ ಶ್ರೀಲಕ್ಷ್ಮಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.