ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿವಿಧ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲು ಸಂಘಟನೆಗಳಲ್ಲಿ ಹೆಸರು ನೋಂದಾಯಿಸಿರುವ ಸದಸ್ಯರ ದತ್ತಾಂಶ ಪಡೆಯಲು ಸಮಾಲೋಚನಾ ಸಭೆ ಬುಧವಾರ ಮಡಿಕೇರಿಯಲ್ಲಿ ನಡೆಯಿತು.ತಾಲೂಕು ಕಾರ್ಮಿಕ ಅಧಿಕಾರಿ ಎಂ.ಎ. ಯತ್ನಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, 23 ಅಸಂಘಟಿತ ವರ್ಗಗಳನ್ನು ಗುರುತಿಸಲಾಗಿದೆ ಎಂದರು.ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್‌ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಗಿಗ್ ವೃತ್ತಿ ನಿರ್ವಹಿಸುತ್ತಿರುವ ಡೆಲಿವರಿ ಕಾರ್ಮಿಕರು, ದಿನಪತ್ರಿಕೆ ವಿತರಿಸುವ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೊಟೋಗ್ರಾಪರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಕಲ್ಯಾಣ ಮಂಟಪ/ಸಭಾ ಭವನ/ ಟೆಂಟ್/ ಪೆಂಡಾಲ್‌ಗಳ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಬೀಡಿ ಕಾರ್ಮಿಕರು ಮತ್ತು ಅಸಂಘಟಿತ ವಿಕಲಚೇತನ ಕಾರ್ಮಿಕರು, ಅಲೆಮಾರಿ ಪಂಗಡದ ಅಸಂಘಟಿತ ಕಾರ್ಮಿಕರು ಹಾಗೂ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರು (ಮೆಕ್ಯಾನಿಕ್ ಸೇರಿದಂತೆ) ಅಂತೆಯೇ, ಕರ್ನಾಟಕ ಮೋಟಾರ್ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರಾದ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳು ನಿಲ್ದಾಣ ಸಿಬ್ಬಂದಿ, ಮಾರ್ಗಪರಿಶೀಲನಾ ಸಿಬ್ಬಂದಿ, ಬುಕ್ಕಿಂಗ್ ಗುಮಾಸ್ತ, ನಗದು ಗುಮಾಸ್ತ, ಡೀಪೋ ಗುಮಾಸ್ತ, ಸಮಯ ಸೂಚಕ, ಕಾವಲುಗಾರ ಅಥವಾ ಪರಿಚಾರಕ, ನಿಲ್ದಾಣ ಲೋಡಿಂಗ್/ಅನ್‌ಲೋಡಿಂಗ್ ಸಿಬ್ಬಂದಿ, ಮೋಟಾರು ಗ್ಯಾರೇಜ್ ಸಿಬ್ಬಂದಿ, ಟೈರ್ ಜೋಡಿಸುವ ಮತ್ತು ಬೇರ್ಪಡಿಸುವ ಸಿಬ್ಬಂದಿ, ಪಂಚರ್ ದುರಸ್ತಿ ಮಳಿಗೆ ಕಾರ್ಮಿಕರು, ವ್ಹೀಲ್ ಬ್ಯಾಲೆನ್ಸಿಂಗ್ ಮತ್ತು ಅಲೈನ್‌ಮೆಂಟ್ ಸಿಬ್ಬಂದಿ, ನೀರಿನಿಂದ ವಾಹನ ಸ್ವಚ್ಛಗೊಳಿಸುವ ಘಟಕ ಸಿಬ್ಬಂದಿ, ಮೋಟಾರ್ ವಾಹನ ಹೊರಕವಚ ನಿರ್ಮಾಣ ಘಟಕಗಳಲ್ಲಿ, ಟಿಂಕರಿಂಗ್, ಎಲೆಕ್ಟಿçಕಲ್ ಹಾಗೂ ಎ.ಸಿ.ಘಟಕಗಳಲ್ಲಿನ ಸಿಬ್ಬಂದಿ ಕಾರ್ಮಿಕರನ್ನು ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಕ್ಷೇಮಾಭಿವೃದ್ದಿ ಮಂಡಳಿಯಡಿ ಪ್ರತ್ಯೇಕವಾಗಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಎಂದು ವಿವರಿಸಿದರು.
ವಿವಿಧ ಸೌಲಭ್ಯ ನೀಡಿಕೆ:ಮುಂದಿನ ದಿನಗಳಲ್ಲಿ 23 ಅಸಂಘಟಿತ ವಲಯದ ಕಾರ್ಮಿಕರಿಗೆ ಅಪಘಾತ ಪರಿಹಾರ ಸೌಲಭ್ಯ, ಸಹಜ ಮರಣ ಪರಿಹಾರ (ಅಂತ್ಯಕ್ರಿಯೆ ಧನಸಹಾಯ) ಹಾಗೂ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿಯಡಿ ಅಪಘಾತ ಮರಣ, ಸ್ವಾಭಾವಿಕ ಮರಣ, ಮೃತ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ನೆರವು, ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ನೆರವು, ಮಹಿಳಾ ಕಾರ್ಮಿಕರಿಗೆ ಮಾತೃತ್ವ ನೆರವು ಸೇರಿದಂತೆ ಇತರೆ ಸೌಲಭ್ಯಗಳು ದೊರೆಯುತ್ತದೆ ಎಂದು ಹೇಳಿದರು.
ವಿವಿಧ ವಲಯಗಳ ಕಾರ್ಮಿಕ ಸಂಘಟನೆಗಳ ಮುಖಂಡರಾದ ಗಿರೀಶ್, ಶೇಕ್ ಅಹ್ಮದ್, ವಿಜಯ್, ಎಂ.ಟಿ ಮಧು, ಲವಕುಮಾರ್, ಆವರ್ತಿ ಆರ್. ಮಹಾದೇವಪ್ಪ, ಕಿರಣ್, ರಶಿಕ್, ಸಂತೋಷ್ ಎಸ್, ಬಿ.ಎಸ್.ರಮೇಶ್, ಮೇದಪ್ಪ, ಸಮದ್, ಸುಲೈಮಾನ್,ವಿರಾಜಪೇಟೆ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ನಿಖಿಲ್ ಚಂದ್ರ ಪಿ.ಎಂ, ಸೋಮವಾರಪೇಟೆ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ಶಶಿಧರ್ ಎಸ್, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಡೇಟಾ ಎಂಟ್ರಿ ಆಪರೇಟರ್ ವಾಣಿ ಎಂ.ಜಿ ಮತ್ತು ಇಲಾಖೆಯ ಸಿಬ್ಬಂದಿ ಹಾಜರಿದ್ದರು.