ಕನಕಗಿರಿಯಲ್ಲಿ 330 ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ

| Published : Mar 23 2024, 01:18 AM IST

ಸಾರಾಂಶ

ಕನಕಗಿರಿ ತಾಲೂಕಿನಲ್ಲಿ ದೃಷ್ಟಿದೋಷ ಹೊಂದಿದ 330 ವಿದ್ಯಾರ್ಥಿಗಳಿಗೆ ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಇಲಾಖೆಯಿಂದ ಉಚಿತ ಕನ್ನಡಕ ವಿತರಿಸಲಾಗಿದೆ.

ಕನಕಗಿರಿ: ತಾಲೂಕಿನಲ್ಲಿ ೩೩೦ ಮಕ್ಕಳು ದೃಷ್ಟಿದೋಷ ಹೊಂದಿದ್ದು, ಅವರೆಲ್ಲರಿಗೂ ಉಚಿತ ಕನ್ನಡಕ ವಿತರಿಸಲಾಗಿದೆ ಎಂದು ನೇತ್ರಾಧಿಕಾರಿ ಮುರ್ತುಜಾಸಾಬ್ ಹೇಳಿದರು.ಪಟ್ಟಣದ ಲಕ್ಷ್ಮೀದೇವಿ ಕೆರೆ ಕಲ್ಪಿಸುವ ರಸ್ತೆಯಲ್ಲಿನ ಮೊರಾರ್ಜಿ ದೇಸಾಯಿ ವಸತಿ (ಪ.ಜಾ.) ಶಾಲೆಯಲ್ಲಿ ಹಮ್ಮಿಕೊಂಡಿದ್ದ ದೃಷ್ಟಿದೋಷ ಹೊಂದಿದ ಮಕ್ಕಳಿಗೆ ಕನ್ನಡಕ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮಾತನಾಡಿದರು.ತಾಲೂಕು ವ್ಯಾಪ್ತಿಯ ಅಂಬೇಡ್ಕರ್ ವಸತಿ ಶಾಲೆ, ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ಶಾಲೆ, ಆದರ್ಶ ವಿದ್ಯಾಲಯ, ಮೌಲಾನ ಆಜಾದ್, ಕೆಪಿಎಸ್, ಎಂಎಚ್‌ಪಿಎಸ್ ಸೇರಿದಂತೆ ಹುಲಿಹೈದರ, ನವಲಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹಿರಿಯ, ಕಿರಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ೧೨ ಸಾವಿರಕ್ಕೂ ಹೆಚ್ಚು ಮಕ್ಕಳ ನೇತ್ರ ಪರೀಕ್ಷಿಸಲಾಗಿದ್ದು, ಈ ಪೈಕಿ ೩೫೦ ಮಕ್ಕಳು ದೃಷ್ಟಿದೋಷ ಹೊಂದಿರುವುದು ದೃಢಪಟ್ಟಿದೆ. ೨೦ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದು, ಇನ್ನುಳಿದ ೩೩೦ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಇಲಾಖೆಯಿಂದ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ ಎಂದರು.ಆನಂತರ ಶಾಲೆಯ ಪ್ರಾಂಶುಪಾಲ ಆರ್.ಆರ್. ಮಡ್ಡಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕನ್ನಡಕ ಅನುಕೂಲವಾಗಿದೆ ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಕ ರಮೇಶ, ಸಿಎಚ್‌ಸಿಒ ಪ್ರೇಮಾ, ಮುಖ್ಯೋಪಾಧ್ಯಾಯ ಆರ್.ಆರ್. ಮಡ್ಡಿ, ಶಿವಕುಮಾರ, ರವಿ ಸಜ್ಜನ, ವಿವಿಧ ಶಾಲೆಗಳ ಶಿಕ್ಷಕರು ಇದ್ದರು.