ಸಂಡೂರು: ತಾಲೂಕಿನ ತೋರಣಗಲ್ಲಿನ ಓಪಿಜೆ ಕೇಂದ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲು ಫೌಂಡೇಶನ್, ಜೆಎಸ್‌ಡಬ್ಲು ಸ್ಟೀಲ್, ಜೆಎಸ್‌ಡಬ್ಲು ವಿಜಯನಗರ ಮೆಟಾಲಿಕ್ಸ್, ಹಾಗೂ ಜೆಎಸ್‌ಡಬ್ಲು ಸಿಮೆಂಟ್ ಕಾರ್ಪೊರೇಷನ್‌ಗಳ ಸಿಎಸ್‌ಆರ್ ಉಪಕ್ರಮದಡಿ ತಾಲೂಕಿನ ೧೦ ಗ್ರಾಮಗಳ ವ್ಯಾಪ್ತಿಯಲ್ಲಿನ ೧೬ ಸರ್ಕಾರಿ ಶಾಲೆಗಳಿಗೆ ₹೩೫ ಲಕ್ಷ ಮೌಲ್ಯದ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಯಿತು.ಫೌಂಡೇಶನ್ ದಕ್ಷಿಣ ಭಾರತ ವಲಯದ ಮುಖ್ಯಸ್ಥ ಪೆದ್ದಣ್ಣ ಬೀಡಲ ಮಾತನಾಡಿ, ಮಕ್ಕಳ ಸಮಗ್ರ ಬೆಳವಣಿಗೆಗೆ ಕಂಪನಿಗಳ ಸಾಮೂಹಿಕ ಬದ್ಧತೆಯನ್ನು ಈ ಕಾರ್ಯಕ್ರಮವು ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳ ದೈಹಿಕ ಸದೃಢತೆ, ಶಿಸ್ತು, ತಂಡದ ಕೆಲಸ ಮತ್ತು ನಾಯಕತ್ವ ಕೌಶಲ್ಯಗಳನ್ನು ಬೆಳೆಸಲು ಶಾಲೆಗಳು ಕ್ರೀಡಾ ಕಿಟ್‌ಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಜೆಎಸ್‌ಡಬ್ಲು ಸ್ಟೀಲ್ ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ ಮಾತನಾಡಿ, ಕ್ರೀಡೆಗಳು ಭವಿಷ್ಯದ ಚಾಂಪಿಯನ್‌ಗಳನ್ನು ರೂಪಿಸುವ ಮತ್ತು ಯುವಜನರಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ. ಸಮುದಾಯ ಅಭಿವೃದ್ಧಿಗೆ ಜೆಎಸ್‌ಡಬ್ಲು ನಿರಂತರ ಬೆಂಬಲವನ್ನು ನೀಡುತ್ತಿದೆ ಎಂದರು.ಜೆಎಸ್‌ಡಬ್ಲು ಸಿಮೆಂಟ್ ಸ್ಥಾವರದ ಮುಖ್ಯಸ್ಥ ರಾಜಕುಮಾರ್ ಧೆಂಪೆ, ಜೆಎಸ್‌ಡಬ್ಲು ಸ್ಟೀಲ್‌ನ ಪರಿಸರ ಇಲಾಖೆಯ ಸಹಾಯಕ ಉಪಾಧ್ಯಕ್ಷ ಜಯಪ್ರಕಾಶ್ ಹಾಗೂ ಶಿಕ್ಷಣ ಇಲಾಖೆಯ ಸಿಆರ್‌ಪಿ ಎಂ.ಜೆ. ಯಾಸ್ಮಿನ್ ಮಾತನಾಡಿದರು.
ಫೌಂಡೇಶನ್‌ನ ಸ್ಥಳೀಯ ಮುಖ್ಯಸ್ಥರಾದ ಭಾರತಿ ಪಳನಿಸಾಮಿ, ನಾಗಲಾಪುರ, ಬಸಾಪುರ, ತಾಳೂರು, ಜೋಗ, ಹೊಸ ದರೋಜಿ, ಮಾದಾಪುರ, ಹಳೆ ಮಾದಾಪುರ, ಲಿಂಗದಹಳ್ಳಿ, ಕೋಡಾಲು, ದೊಡ್ಡ ಅಂತಾಪುರ, ಚಿಕ್ಕಂತಾಪುರ ಗ್ರಾಮಗಳ ಶಾಲೆಗಳ ಪ್ರತಿನಿಧಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಸಂಡೂರು ತಾಲೂಕಿನ ತೋರಣಗಲ್ಲಿನ ಓಪಿಜೆ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೋರಣಗಲ್ಲು ಸುತ್ತಲಿನ ೧೬ ಸರ್ಕಾರಿ ಶಾಲೆಗಳಿಗೆ ಜೆಎಸ್‌ಡಬ್ಲು ಫೌಂಡೇಶನ್ ವತಿಯಿಂದ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಯಿತು.