ವಿದ್ಯಾರ್ಥಿಗಳಿಗೆ ಕ್ರೀಡಾ ಶೂ ವಿತರಣೆ

| Published : Nov 11 2024, 12:46 AM IST / Updated: Nov 11 2024, 12:47 AM IST

ಸಾರಾಂಶ

ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿರುವ ತಿತಿಮತಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಶೂ ಗಳನ್ನು ಕೊಡುಗೆಯಾಗಿ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿರುವ ತಿತಿಮತಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಶೂಗಳನ್ನು ಕೊಡುಗೆಯಾಗಿ ನೀಡಲಾಗಿದೆ.

ಕೋಲಾರದಲ್ಲಿ ಜರುಗಲಿರುವ ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯನ್ನು ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರತಿನಿಧಿಸಲಿರುವ ತಂಡದಲ್ಲಿ ಸ್ಥಾನ ಪಡೆದಿರುವ ತಿತಿಮತಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ವತಿಯಿಂದ ಈ ಕ್ರೀಡಾ ಶೂಗಳನ್ನು ವಿತರಿಸಲಾಗಿದೆ.

ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾದ ಸಿ.ಎಂ. ರಾಮಕೃಷ್ಣ ಅವರ ನಿರ್ದೇಶನದಂತೆ ಶಾಲೆಗೆ ತೆರಳಿದ ಸಂಘದ ನಿರ್ದೇಶಕರಾದ ಎಂ.ಎ. ಮಂಜುಳಾ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಆರ್. ಚಂದ್ರಕಲಾ ಮತ್ತು ಸಿಬ್ಬಂದಿ ನೇತ್ರ ಅವರು ವಿದ್ಯಾರ್ಥಿಗಳಿಗೆ ಖುದ್ದಾಗಿ ಸಂಘದ ಕೊಡುಗೆಯನ್ನು ಹಸ್ತಾಂತರಿಸಿದರು.

ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕರಾದ ಎ.ಪಿ. ಮಂಗಳ, ಶಿಕ್ಷಕರಾದ ಸಿ.ಎಂ. ರಾಘವೇಂದ್ರ ಸೋಮಶೇಖರ್ ಪ್ರಸಾದ್, ಚೆನ್ನಯ್ಯ, ನವೀನ್ ಬಾಸಿತ್ ಹಾಗೂ ಶರತ್ ಕುಮಾರ್ ಹಾಜರಿದ್ದರು.