ಸಾರಾಂಶ
ರಾಮನಗರ: ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಆರ್ಥಿಕ ಸಹಾಯಧನ ವಿತರಿಸಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತಾಲೂಕು ವತಿಯಿಂದ ಕಸಬಾ ವಲಯದ ಬಿಳಗುಂಬ ಪಂಚಾಯತ್ ವ್ಯಾಪ್ತಿಯ ರಾಜೀವ್ ಗಾಂಧಿಪುರ ಗ್ರಾಮದ ಶಂಕರ್ ಮತ್ತು ಸುಶೀಲಾ ದಂಪತಿ ಪುತ್ರ ಬೈಕ್ ಅಪಘಾತದಲ್ಲಿ ಗಾಯಗೊಂಡು 9 ತಿಂಗಳುಗಳಿಂದ ನಡೆದಾಡಲು ಅಶಕ್ತರಾಗಿದ್ದರು. ಈ ಯುವಕನ ಚಿಕಿತ್ಸೆಗಾಗಿ ಕ್ರಿಟಿಕಲ್ ಇಳ್ನೆಸ್ ಕಾರ್ಯಕ್ರಮದಡಿಯಲ್ಲಿ 20,000 ಸಹಾಯಧನ ಮೊತ್ತವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರಾತಿ ಮಾಡಿದ್ದರು. ಆ ಮೊತ್ತವನ್ನು ಬಿಳಗುಂಬ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಗೌಡರು ವಿತರಿಸಿದರು. ಇದೇ ವೇಳೆ ನಡೆದಾಡಲು ಜನಮಂಗಲ ಕಾರ್ಯಕ್ರಮದಡಿ ಯು ಶೇಪ್ ವಾಕರ್ ಅನ್ನು ಕೂಡ ವಿತರಣೆ ಮಾಡಲಾಯಿತು. ತಾಲೂಕಿನ ಯೋಜನಾಧಿಕಾರಿ ಮುರಳೀಧರ್, ಮೇಲ್ವಿಚಾರಕರಾದ ಶ್ರೀನಿವಾಸ್, ಸೇವಾ ಪ್ರತಿನಿಧಿ ಸುನೀತಾ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.