ಏಪ್ರಿಲ್‌ ತಿಂಗಳಲ್ಲಿ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ: ಪ್ರಸಾದ ಅಬ್ಬಯ್ಯ

| Published : Feb 21 2025, 12:45 AM IST

ಏಪ್ರಿಲ್‌ ತಿಂಗಳಲ್ಲಿ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ: ಪ್ರಸಾದ ಅಬ್ಬಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾಮಗಾರಿಗಳ ಕುರಿತು ಸಭೆ ನಡೆಸಿದರು.

ಧಾರವಾಡ: ಹು-ಧಾ ಅವಳಿ ನಗರದ ಕೊಳಗೇರಿ ನಿವಾಸಿಗಳಿಗೆ ಶೀಘ್ರ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಪ್ರಸಾದ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾಮಗಾರಿಗಳ ಕುರಿತು ಸಭೆ ನಡೆಸಿದ ಅವರು, ಬರುವ ಏಪ್ರಿಲ್‌ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಕೊಳಗೇರಿಯ ಸಾವಿರಕ್ಕೂ ಹೆಚ್ಚು ಜನರಿಗೆ ಮುಖ್ಯಮಂತ್ರಿಗಳಿಂದ ಹಕ್ಕು ಪತ್ರ ವಿತರಿಸಲಾಗುವುದು. ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿಯವರು ನವಲಗುಂದ ಮತ್ತು ಅಣ್ಣಿಗೇರಿ ಪಟ್ಟಣದಲ್ಲಿ ಕೊಳಗೇರಿ ನಿವಾಸಿಗಳಿಗೆ ರಾಜ್ಯಕ್ಕೆ ಮಾದರಿ ಆಗುವ ಮನೆಗಳನ್ನು ಕಟ್ಟಿಸುತ್ತಿದ್ದಾರೆ. ಈ ಮಾದರಿಗಳನ್ನು ರಾಜ್ಯದ ಇತರ ನಗರಗಳ ಕೊಳಗೇರಿಗಳಲ್ಲಿ ನಿರ್ಮಿಸುವ ಮನೆಗಳಿಗೆ ಬಳಸಲಾಗುವುದು ಎಂದರು.

ಜಿಲ್ಲೆಯಲ್ಲಿರುವ ವಿವಿಧ ನಗರಗಳಲ್ಲಿನ ಘೋಷಿತ ಮತ್ತು ಅಘೋಷಿತ ಕೊಳಗೇರಿ ಪ್ರದೇಶಗಳಿಗೆ ಕಳೆದ ಎರಡು ದಿನಗಳಿಂದ ಮಂಡಳಿಯ ಅಧಿಕಾರಿ ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಲಾಗಿದೆ. ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ, ಅಲ್ಲಿನ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಈಗಾಗಲೇ ಜಿಲ್ಲೆಯ 138 ಕೊಳಗೇರಿ ಪ್ರದೇಶಗಳಲ್ಲಿ ಹುಡ್ಕೋ, ವಾಂಬೆ, ವಿಶೇಷ ಘಟಕ ಯೋಜನೆ, ಐಎಚ್‌ಎಸ್‌ಡಿಪಿ. ರಾಜೀವ ಆವಾಸ್ ಯೋಜನೆಗಳಡಿ ಒಟ್ಟು 7,667 ಮನೆಗಳನ್ನು ನಿರ್ಮಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿನ ಕೊಳಗೇರಿ ಪ್ರದೇಶಗಳಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಪೂರೈಸಲು ₹13.78 ಕೋಟಿ ವೆಚ್ಚ ಮಾಡಲಾಗಿದೆ. 48 ಕೊಳಗೇರಿ ಪ್ರದೇಶಗಳ ಪೈಕಿ 39 ಕೊಳಗೇರಿ ಪ್ರದೇಶಗಳ ಒಟ್ಟು ಕ್ಷೇತ್ರ 245 ಎಕರೆ ಇದ್ದು ಒಟ್ಟು 11,953 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದ್ದು, ಹಕ್ಕು ಪತ್ರ ವಿತರಣೆ ಹಾಗೂ ಹಕ್ಕು ಪತ್ರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಘೋಷಿತ ಮತ್ತು ಅಘೋಷಿತ ಕೊಳಗೇರಿ ಪ್ರದೇಶಗಳಲ್ಲಿ ಬಾಕಿ ಇರುವ ಸರ್ವೆ ಕಾರ್ಯ ಭೂದಾಖಲೆಗಳ ಇಲಾಖೆಯ ಅಧಿಕಾರಿಗಳು ಕಾಲಮಿತಿಯಲ್ಲಿ ಮುಕ್ತಾಯಗೊಳಿಸಬೇಕು. ನಿವಾಸಿಗಳಿಗೆ ಹಕ್ಕು ಪತ್ರ ಕೊಡುವುದನ್ನು ಕಾನೂನು ಪ್ರಕಾರ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸದಸ್ಯ ವಿನಾಯಕ ಜಿ., ರಾಮಕೃಷ್ಣ ರೊಳ್ಳಿ, ಮಹಮ್ಮದ ರಷಿದ್, ಆಯುಕ್ತರಾದ ಡಾ. ಅಶೋಕ ಡಿ.ಆರ್., ಮುಖ್ಯ ಅಭಿಯಂತರ ಎಚ್.ಪಿ. ಸುಧೀರ, ಪಾಲಿಕೆಯ ಆಯುಕ್ತ ರುದ್ರೇಶ ಗಾಳಿ, ಅಜೀಜ್ ದೇಸಾಯಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರರಾದ ಡಿ.ಎಚ್. ಹೂಗಾರ, ಜೆ.ಬಿ. ಮಜ್ಜಗಿ, ಕೆ.ಆರ್. ಪಾಟೀಲ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳಿದ್ದರು.ಪ್ರಧಾನ ಮಂತ್ರಿ ಆವಾಸ್ ಯೋಜನೆ ಹೆಸರು ಬದಲಿಸುವ ಚಿಂತನೆ

ಧಾರವಾಡ:

ಪ್ರಧಾನಮಂತ್ರಿ ಆವಾಸ್ ಯೋಜನೆ ಹೆಸರು ಬದಲಾವಣೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಿರುವುದಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿ ಒಂದು ಮನೆ ನಿರ್ಮಾಣಕ್ಕೆ ₹7.50 ಲಕ್ಷ ವೆಚ್ಚವಾಗಲಿದೆ. ಈ ಪೈಕಿ ರಾಜ್ಯ ₹1.20 ಲಕ್ಷ, ಕೇಂದ್ರ ₹1.50 ಲಕ್ಷ, ₹1 ಲಕ್ಷ ಫಲಾನುಭವಿ ಭರಿಸಬೇಕು. ಇನ್ನುಳಿದ ಹಣಕ್ಕೆ ಬ್ಯಾಂಕ್ ಸಾಲ ಕೊಡಿಸಿ, ಅದನ್ನೂ ಫಲಾನುಭವಿ ಕಂತು ರೂಪದಲ್ಲಿ ಭರಿಸಬೇಕು. ಆದಾಗ್ಯೂ ಸಕಾಲಕ್ಕೆ ಹಣ ಬಾರದ ಕಾರಣಕ್ಕಾಗಿ ಈ ಯೋಜನೆಗೆ ಹಿನ್ನಡೆಯಾಗಿದೆ. ಕೇವಲ ₹1.50 ಲಕ್ಷ ನೀಡುವ ಈ ಯೋಜನೆಗೆ ಪ್ರಧಾನಿ ಹೆಸರು ಸೂಕ್ತ ಅಲ್ಲ. ಆದ್ದರಿಂದ ಮನೆಗೆ ತಗಲುವ ಸಂಪೂರ್ಣ ವೆಚ್ಚ ರಾಜ್ಯ ನೀಡಲಿದ್ದು, ಈ ಯೋಜನೆ ಹೆಸರು ಬದಲಾಯಿಸಲು ಚಿಂತನೆ ನಡೆದಿದೆ ಎಂದರು.

2013ರಲ್ಲೂ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ 1.80 ಲಕ್ಷ ಮನೆಗಳ ನಿರ್ಮಾಣದ ಘೋಷಣೆ ಮಾಡಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಅನುದಾನ ನೀಡಲಿಲ್ಲ. ಮನೆಗಳೂ ಮಂಜೂರಾಗಲಿಲ್ಲ ಎಂದು ದೂರಿದ ಅವರು, ಈ ಯೋಜನೆ ಮುಗಿಸಲು ಸಿದ್ದರಾಮಯ್ಯರೇ ಬರಬೇಕಾಯಿತು. ಈ 1.80 ಲಕ್ಷ ಮನೆಗಳ ನಿರ್ಮಾಣಕ್ಕೆ ₹6 ಸಾವಿರ ಕೋಟಿ ಹಣ ಕೊಡಲು ಸಿದ್ದರಾಮಯ್ಯ, ಸಚಿವ ಜಮ್ಮಿರ್ ಅಹ್ಮದ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಸದ್ಯ 62 ಸಾವಿರ ಮನೆಗಳ ಹಂಚಿಕೆ ಸಹ ನಡೆಯುತ್ತಿದೆ. ಮೊದಲ ಹಂತದಲ್ಲಿ 36,600 ಹಾಗೂ ದ್ವಿತೀಯ ಹಂತದಲ್ಲಿ 38 ಸಾವಿರ ಮನೆಗಳ ಹಸ್ತಾಂತರ ಕಾರ್ಯ ನಡೆಯಲಿದೆ ಎಂದರು.

ಅಧಿವೇಶನ ಮುಗಿದ ಬಳಿಕ ಮಾರ್ಚ್ ತಿಂಗಳಲ್ಲಿ ಹು-ಧಾ ಪೂರ್ವ, ಹು-ಧಾ ಸೆಂಟ್ರಲ್, ನವಲಗುಂದ ಸೇರಿ ಒಟ್ಟು ಒಂದು ಸಾವಿರ ಮನೆಗಳ ಹಂಚಿಕೆ ಜೊತೆಗೆ ಹಕ್ಕು ಪತ್ರ ವಿತರಣೆ ಕಾರ್ಯವೂ ನಡೆಸುವುದಾಗಿ ತಿಳಿಸಿದರು.