ಸಾರಾಂಶ
ಹಳಿಯಾಳ: ಆಧುನಿಕತೆ ಬೆಳೆದಂತೆ ಮಾನವನ ಜೀವನಕ್ಕೆ ಅನುಕೂಲ ಮಾಡುವಂತಹ ಸೌಲಭ್ಯಗಳು ಸಾಧನಗಳ ಸಂಖ್ಯೆಯು ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಮಾನವನಲ್ಲಿ ಇರಬೇಕಾದ ಪ್ರೀತಿ, ದಯೇ, ಕರುಣೆ, ಸಹಾನುಭೂತಿ, ಕಾಳಜಿ, ಮಾನವೀಯ ಮೌಲ್ಯಗಳು ಮಾಯವಾಗಲಾರಂಭಿಸಿವೆ ಎಂದು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಬುಧವಾರ ಸಂಜೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ವಿಕಲಚೇನತರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಇಂದು ಯುವಪೀಳಿಗೆ ಹಣ, ಆಸ್ತಿ, ಯಶಸ್ಸಿನ ಬೆನ್ನು ಹತ್ತಿ ತಂದೆ-ತಾಯಿಗಳನ್ನು ಮರೆಯಲಾರಂಭಿಸಿದ್ದೆ. ಅವರೊಂದಿಗೆ ಮಾತನಾಡಲು ಅವರ ಸುಖ-ದುಖಃಗಳನ್ನು ಹಂಚಿಕೊಳ್ಳಲು ಸಮಯ ಇಲ್ಲವಾಗಿದೆ ಎಂದರು. ಇದರಿಂದ ಸಾಕಷ್ಟು ತಂದೆ-ತಾಯಿಯಂದಿರು ಇಂದು ದುಖಃದ ಮಡುವಿನಲ್ಲಿ ತಮ್ಮ ವೃದ್ಧಾಪ್ಯವನ್ನು ದೂಡುತ್ತಿದ್ದಾರೆ. ತಮಗೆ ಮಕ್ಕಳು ಏಕೆ ಹುಟ್ಟಿದ್ದರು ಎಂದು ರೋಧಿಸುತ್ತಿದ್ದಾರೆ. ಇದು ಸಮಾಜದ ಹಿತದೃಷ್ಟಿಯಿಂದ ಆರೋಗ್ಯಕರವಾದ ಬೆಳವಣಿಗೆಯಲ್ಲ ಎಂದರು.
ದೇವರ ಸೇವೆ:ವಿಕಲಚೇತನರ ಹಾಗೂ ದುರ್ಬಲರ ಸೇವೆಯೇ ನಿಜವಾದ ದೇವರ ಸೇವೆಯಾಗಿದೆ. ಇವರಿಗೆ ಅನುಕಂಪ ತೋರಿದರೆ ಸಾಲದು ಅವರಿಗೆ ಬದುಕಲು ಅವಕಾಶ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಕರ್ತವ್ಯವು ಆಗಿದೆ. ವಿಕಲಚೇತನರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗವನ್ನು ಅರ್ಹರು ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ 45 ವಿಕಲಚೇನರಿಗೆ ಹಾಗೂ 47 ಹಿರಿಯ ನಾಗರಿಕರಿಗೆ ವಿವಿಧ 313 ಸಾಮಗ್ರಿಗಳನ್ನು ವಿತರಿಸಲಾಯಿತು.ತಾಪಂ ಇಒ ವಿಲಾಸರಾಜ, ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ಜಿಪಂ ಎಇಇ ಸತೀಶ್ ಆರ್ ಹಾಗೂ ಇತರರು ಇದ್ದರು.