ಕನ್ನಡಪ್ರಭ ವಾರ್ತೆ ಭಟ್ಕಳ

ಎಂಡೋ ಸಲ್ಫಾನ್ ಬಾಧಿತ ಮಕ್ಕಳಿಗಾಗಿ ಆಶಾಕಿರಣ ಯೋಜನೆಯನ್ನು ರೂಪಿಸಿ, ಫಿಸಿಯೋಥೆರಪಿ ಚಿಕಿತ್ಸೆ ಹಾಗೂ ವಿಶೇಷ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ ಹೇಳಿದರು.

ಬೆಳಕೆಯ ಫಿಸಿಯೋಥೆರಪಿ ಚಿಕಿತ್ಸಾ ಕೇಂದ್ರದಲ್ಲಿ ಎಂಡೋಬಾಧಿತರ ಪರಿಕರ ವಿತರಣಾ ಸಾಮಗ್ರಿ ವಿತರಿಸಿ ಮಾತನಾಡಿದರು. ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಆಶಾಕಿರಣ ಯೋಜನೆಯಡಿ ಭಟ್ಕಳದ ಬೆಳಕೆ ಗ್ರಾಮದಲ್ಲಿ ಎಂಡೋಸಲ್ಫಾನ್ ಬಾಧಿತರಿಗಾಗಿ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಯೋಜನೆಯ ಮುಂದುವರಿದ ಭಾಗವಾಗಿ ಎಂಡೋಬಾಧಿತ ಮಕ್ಕಳಿಗೆ ಅಂಗವಿಕಲಸ್ನೇಹಿ ಉಪಕರಣ, ಡ್ರಾಯಿಂಗ್ ಉಪಕರಣಗಳ ಕಿಟ್, ನ್ಯೂಟ್ರಿಶನ್ ಕಿಟ್, ಪ್ರೊಟೀನ್ ಪೌಡರ್ ಹಾಗೂ ನೋವು ನಿವಾರಕ ಜೆಲ್ ಜತೆಗೆ ಮಲ್ಟಿ ವಿಟಮಿನ್ ಕ್ಯಾಪ್ಸೂಲ್‌ಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಭಗವಾನ್ ನಿತ್ಯಾನಂದ ಶಕ್ತಿಪಾತ ಯೋಗ ಟ್ರಸ್ಟಿನ ಅಧ್ಯಕ್ಷ ಪಾಂಡುರಂಗ ನಾಯ್ಕ ಮಾತನಾಡಿ, ಸ್ಕೊಡ್‌ವೆಸ್ ಸಂಸ್ಥೆಯು ಸಮಾಜದ ಹಲವಾರು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಈ ನೊಂದ ಎಂಡೋಸಲ್ಫಾನ್ ಮಕ್ಕಳ ಸಲುವಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.

ಸ್ಕೊಡ್‌ವೆಸ್‌ನ ದಾಖಲೀಕರಣ ಅಧಿಕಾರಿ ಸುಧೀರ್ ಶೆಟ್ಟಿ ಹಾಗೂ ಆಶಾಕಿರಣ ಯೋಜನೆಯ ಸಂಯೋಜಕ ಸೂರ್ಯ ಗುಂಡು, ಯೋಜನೆಯ ಸಿಬ್ಬಂದಿ ಮತ್ತು ಊರ ಹಿರಿಯ ನಾಗರಿಕರು, ಪಾಲಕರು ಉಪಸ್ಥಿತರಿದ್ದರು.ಸರಗಳ್ಳತನ ಮಾಡಿದ ಮಹಿಳಾ ಆರೋಪಿ ಬಂಧನ


ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನದಲ್ಲಿ ನಡೆದ ಸರಗಳ್ಳತನ ಪ್ರಕರಣವನ್ನು ಪೊಲೀಸರು ಶೀಘ್ರ ಪತ್ತೆ ಹಚ್ಚಿ, ಅಂತರ ಜಿಲ್ಲಾ ಆರೋಪಿತಳನ್ನು ಬಂಧಿಸಿದ್ದಾರೆ.

ಕೇರಳದ ಕನ್ನೂರು ಜಿಲ್ಲೆಯ ನಿವಾಸಿ ಜಯಂತ ಎ.ವಿ. ವೇಣುಗೋಪಾಲ (42) ನೀಡಿದ ದೂರಿನ ಮೇರೆಗೆ, ಅವರ ತಾಯಿಗೆ ಸೇರಿದ ಸುಮಾರು 36 ಗ್ರಾಂ ತೂಕದ ಬಂಗಾರದ ಸರ ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ನಡೆಸಿದ ಪಿಎಸ್‌ಐ ಲೋಕನಾಥ ರಾಥೋಡ ನೇತೃತ್ವದ ತಂಡ ಆರೋಪಿತಳನ್ನು ಪತ್ತೆ ಹಚ್ಚಿ, ಗದಗ ಜಿಲ್ಲೆಯ ಬೆಟಗೇರಿ ನಿವಾಸಿ ಗಂಗಮ್ಮ (65) ಅವರನ್ನು ಮುರ್ಡೇಶ್ವರ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ.ಬಂಧಿತಳಿಂದ ₹3.28 ಲಕ್ಷ ಮೌಲ್ಯದ 27.600 ಗ್ರಾಂ ತೂಕದ ಬಂಗಾರದ ಎರಡು ಗಟ್ಟಿಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಡಿವೈಎಸ್ಪಿ ಗಿರೀಶ ಬಿ. ಹಾಗೂ ಸಿಪಿಐ ಜಗದೀಶ ಹಂಚನಾಳ ಮಾರ್ಗದರ್ಶನದಲ್ಲಿ ನಡೆಯಿತು. ತನಿಖಾಧಿಕಾರಿ ಹಣಮಂತ ಬಿರಾದಾರ ಮತ್ತು ಪಿಎಸ್‌ಐ ಲೋಕನಾಥ ರಾಥೋಡ ನೇತೃತ್ವದಲ್ಲಿ ವನಿತಾ ನಾಯ್ಕ, ಮಂಜುನಾಥ ಲಕ್ಕಾಪುರ, ಸಿದ್ದಪ್ಪ ಕಾಂಬಳೆ, ವಿಜಯ ನಾಯ್ಕ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.