ಸಾರಾಂಶ
ಉಪ್ಪಿನಂಗಡಿ : ಜಿಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು , ಉಪ್ಪಿನಂಗಡಿಯೂ ಸೇರಿದಂತೆ ನೆರೆ ಬಾಧಿಸಬಹುದಾದ ಎಲ್ಲೆಡೆ ನಿಗಾವಿರಿಸಲಾಗಿದೆ. ಸಂಭಾವ್ಯ ಸಮಸ್ಯೆಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದು ದಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು. ಅವರು ನೇತ್ರವತಿ ಹಾಗೂ ಕುಮಾರಧಾರಾ ನದಿ ಸಂಗಮ ಸ್ಥಳವಾದ ಉಪ್ಪಿನಂಗಡಿಗೆ ಶುಕ್ರವಾರ ಸಂಜೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಅಪಾಯ ಮಟ್ಟದ ಸಮೀಪದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ರಾತ್ರಿ ವೇಳೆ ನೀರಿನ ಪ್ರವಾಹ ಹೆಚ್ಚಾಗಿ ನೆರೆ ಸಂಭವಿಸಿದರೆ ಸ್ಥಳಾಂತರಗೊಳ್ಳಬಹುದಾದ ಮನೆಯವರನ್ನು ಮೊದಲೇ ಸ್ಥಳಾಂತರಿಸಲು ಮನವೊಲಿಸಿ ಎಂದು ತಿಳಿಸಿದರು.
ವಿದ್ಯುತ್ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನೆರೆ ಸಂಭವಿಸಿದ ಸಮಯದಲ್ಲಿ ವಿದ್ಯುತ್ ಸರಬರಾಜನ್ನು ತಡೆ ಹಿಡಿಯಲಾಗುತ್ತಿದ್ದು, ಜನತೆ ಇದಕ್ಕೆ ಸಹಕರಿಸಬೇಕೆಂದು ವಿನಂತಿಸಿದರು. ಗಂಜಿ ಕೇಂದ್ರ ಇಲ್ಲವಾ ಪುನರ್ವಸತಿ ಕೇಂದ್ರದ ಸುವ್ಯವಸ್ಥೆಯನ್ನು ಖಾತ್ರಿ ಪಡಿಸಿಕೊಂಡರು.ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳ ಕಾರ್ಯಶೈಲಿಯನ್ನು ಶ್ಲಾಘಿಸಿದ ಜಿಲ್ಲಾಧಿಕಾರಿಯವರು, ಈ ಎಲ್ಲ ಮಾಹಿತಿಯನ್ನು ಜಿಲ್ಲಾಡಳಿತದ ವಿದ್ಯುನ್ಮಾನ ವ್ಯವಸ್ಥೆಗೆ ಅಪಲೋಡ್ ಮಾಡಬೇಕೆಂದು ಪಿಡಿಒಗೆ ನಿರ್ದೆಶನ ನೀಡಿದರು. ಸತತ ಸೂಚನೆಯ ಹೊರತಾಗಿಯೂ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎಂಬ ಸ್ಥಳೀಯರ ದೂರಿಗೆ ಸ್ಪಂದಿಸಿದ ಅವರು, ಅರಣ್ಯ ಇಲಾಖಾಧಿಕಾರಿಗಳಿಗೆ ನಾಳೆಯೊಳಗಾಗಿ ತೆರವಿನ ದಾಖಲೆಯೊಂದಿಗೆ ವರದಿ ಮಾಡಲು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಭೇಟಿಯ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ.ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.