ಸಾರಾಂಶ
- ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1851700 ಮತದಾರರು
- ಕಳೆದ ಚುನಾವಣೆಗಿಂತ 1.20 ಲಕ್ಷ ಮತದಾರರು ಅಧಿಕ ಕನ್ನಡಪ್ರಭ ವಾರ್ತೆ ಕೊಪ್ಪಳಲೋಕಸಭಾ ಚುನಾವಣೆಯ ಅಧಿಸೂಚನೆ ಪ್ರಕಟವಾಗಿದ್ದು, ರಾಜ್ಯದ ಎರಡನೇ ಹಂತದಲ್ಲಿ ಮೇ 7ರಂದು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ರೀತಿಯಲ್ಲಿಯೂ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಹುತೇಕ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇನ್ನೇನು ಮತ ಜಾಗೃತಿ ಮೂಡಿಸುವುದು ಸೇರಿದಂತೆ, ಸಿಬ್ಬಂದಿಗೆ ತರಬೇತಿ ನೀಡುವುದು ಮಾತ್ರ ಬಾಕಿ ಇದೆ ಎಂದರು.ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏ. 12ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ಏ. 19 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ನಿಗದಿ ಮಾಡಲಾಗಿದೆ. ಏ. 20 ನಾಮಪತ್ರ ಪರಿಶೀಲನೆ ನಡೆಯುತ್ತದೆ. ಏ. 22 ನಾಮಪತ್ರ ಹಿಂದೆ ಪಡೆಯಲು ಕೊನೆಯ ದಿನಾಂಕವಾಗಿದೆ. ಮೇ 7ರಂದು ಮತದಾನ ನಡೆಯಲಿದೆ.
ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡು ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.ಕೊಪ್ಪಳ ಜಿಲ್ಲೆಯಲ್ಲಿ 1169151 ಮತದಾರರು ಇದ್ದರೆ, ಮಸ್ಕಿ, ಸಿಂಧನೂರು ಹಾಗೂ ಸಿರಗುಪ್ಪಾ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡು 1851700 ಮತದಾರರು ಇದ್ದಾರೆ.
ಈ ಪೈಕಿ 46162 ಯುವ ಮತದಾರರು ಇದ್ದರೇ 25619 ವಿಕಲಚೇತನರು ಹಾಗೂ 85 ವರ್ಷ ಮೇಲ್ಪಟ್ಟ 12900 ಮತದಾರರಿದ್ದಾರೆ.ಮಹಿಳೆಯರೇ ಅಧಿಕ:
ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು ಮತದಾರರ ಪೈಕಿ ಮಹಿಳಾ ಮತದಾರರೇ ಅಧಿಕ ಇರುವುದು ವಿಶೇಷವಾಗಿದೆ. 912818 ಪುರಷ ಮತದಾರರು ಇದ್ದರೇ 938750 ಮಹಿಳಾ ಮತದಾರರು ಇದ್ದಾರೆ ಎನ್ನುವುದು ಗಮನಾರ್ಹ ಸಂಗತಿ. ಈ ಪೈಕಿ ತೃತೀಯ ಲಿಂಗಗಳು 132 ಇದ್ದಾರೆ.ಅಂಚೆ ಮತದಾನ ಸೌಲಭ್ಯವೂ ಇದ್ದು, ಅರ್ಹರು ಈಗಿನಿಂದಲೇ ಅಂಚೆ ಮತದಾನ ಮಾಡುವುದಕ್ಕೆ ಅರ್ಜಿ ಹಾಕಿಕೊಳ್ಳಬೇಕು. ಹಾಗೆಯೇ 85 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಇರಲಿದೆ. ಬೂತ್ ಗೆ ಬಂದು ಹಾಕುತ್ತೇನೆ ಎನ್ನುವವರು ಹಾಕಬಹುದು. ಮನೆಯಲ್ಲಿಯೇ ಬೇಕು ಎನ್ನುವ ಹಿರಿಯರಿಗೆ ಮನೆಯಲ್ಲಿಯೇ ಮತವನ್ನು ಪಡೆಯುವ ವ್ಯವಸ್ಥೆಯೂ ಇದೆ. ವಿಕಲಚೇತನರು ಮತದಾನಕ್ಕೆ ಬರುವುದು ಆಗದಿದ್ದರೇ ಅಂಥವರಿಗೆ ಗಾಲಿಖುರ್ಚಿಯ ವ್ಯವಸ್ಥೆ ಮಾಡಲಾಗುತ್ತದೆ.
2042 ಮತಗಟ್ಟೆಗಳು:ಕೊಪ್ಪಳ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 2042 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ 1314 ಮತಗಟ್ಟೆಗಳು ಹಾಗೂ ಉಳಿದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ 728 ಮತಗಟ್ಟೆಗಳು ಇರಲಿವೆ. 1500ಕ್ಕೂ ಹೆಚ್ಚು ಮತದಾರರು ಇರುವ ಮತಗಟ್ಟೆಗಳನ್ನು ಆಕ್ಸಿಲರಿ ಮತಗಟ್ಟೆಗಳು ಎಂದು ಕರೆಯಲಾಗುತ್ತದೆ. ಜಿಲ್ಲೆಯಲ್ಲಿ ಮೂರು ಇಂಥ ಮತಗಟ್ಟೆಗಳು ಇವೆ.
ಸಕಲ ಸೌಕರ್ಯ:ಮತಗಟ್ಟೆಯಲ್ಲಿ ಸಕಲ ಸೌಕರ್ಯಗಳನ್ನು ಕಲ್ಪಿಸಲು ಚುನಾವಣೆ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆ ಶೌಚಾಲಯ, ಕುಡಿಯುವ ನೀರು, ವಿಕಲಚೇತನರಿಗೆ ರೇಲಿಂಗ್ ಸಹಿತ ರ್ಯಾಂಪ್ , ನೆರಳಿನ ವ್ಯವಸ್ಥೆ ಮತ್ತು ವಿದ್ಯುತ್ ವ್ಯವಸ್ಥೆ ಮಾಡಲಾಗುವುದು ಎಂದರು.
ಕಟ್ಟುನಿಟ್ಟಿನ ಕ್ರಮ:ಚುನಾವಣೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಶಸ್ತ್ರಸಜ್ಜಿತ ಪೊಲೀಸ್ ಪಡೆ ನಿಯೋಜನೆ ಮಾಡಲಾಗುತ್ತದೆ ಎಂದರು.ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಿಂತಲೂ ಕಂಟ್ರೋಲ್ ಯುನಿಟ್ ಹಾಗೂ ಹಾಗೂ ಬ್ಯಾಲೆಟ್ ಯುನಿಗಳು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕವಾಗಿಯೇ ಇವೆ. 2045 ಮತಗಟ್ಟೆಗಳಿಗೆ 2528 ಕಂಟ್ರೋಲ್ ಯುನಿಟ್, 3704 ಬ್ಯಾಲೆಟ್ ಯುನಿಟ್ ಹಾಗೂ ವಿವಿಪ್ಯಾಟ್ 2703 ನಮ್ಮ ಬಳಿ ಇವೆ.ಕೊಪ್ಪಳ ಜಿಲ್ಲಾ ಚುನಾವಣಾ ಆಯೋಗವನ್ನು ಸಂಪರ್ಕಿಸಲು ಸಾರ್ವಜನಿಕರಿಗೆ ಟೋಲ್ ಪ್ರೀ ಸಂಖ್ಯೆ 1950 ಲಭ್ಯವಿರುತ್ತದೆ. ವೋಟರ್ ಹೆಲ್ಪ್ ಲೈನ್, ಆ್ಯಪ್ ಸೇರಿದಂತೆ ಮೊದಲಾದ ರೀತಿ ಅವಕಾಶ ಕಲ್ಪಿಸಲಾಗಿದೆ.
ಬಿಗಿಭದ್ರತೆ:ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 220 ಸಿಬ್ಬಂದಿಯ ಅಗತ್ಯವಿದೆ. ಆದರೆ, ನಮ್ಮಲ್ಲಿ ಇತರೆ ಎಲ್ಲ ಕಾರ್ಯಗಳಿಗೆ ನಿಯೋಜನೆ ಮಾಡಿದ ಮೇಲೆ 719 ಸಿಬ್ಬಂದಿ ಮಾತ್ರ ಲಭ್ಯವಾಗುತ್ತಾರೆ. ಇದಕ್ಕಾಗಿ ಉಳಿದ ಸಿಬ್ಬಂದಿಯನ್ನು ಹೋಮ್ ಗಾರ್ಡ್, ವಿಶೇಷ ಪಡೆ, ಸಿಆರ್ ಪಿಎಫ್ ಕಂಪನಿಗಳು ಸೇರಿದಂತೆ ಮೊದಲಾದ ವಿಶೇಷ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ರೌಡಿಶೀಟರ್‌ಗಳ ಮಾಹಿತಿ ಪಡೆದು, ಗಡಿಪಾರು ಮಾಡಬೇಕಾದವರ ಕುರಿತು ಕ್ರಮವಹಿಸಲಾಗುತ್ತದೆ. ಪರವಾನಗಿ ಇರುವ ರೈಫಲ್ ಹೊರತುಪಡಿಸಿ, ಉಳಿದವುಗಳನ್ನು ವಾಪಸ್ಸು ಸಹ ಪಡೆಯಲಾಗಿದೆ. 924 ರೌಡಿಶೀಟರ್ ಪೈಕಿ 11 ರೌಡಿಶೀಟರ್ ಜೈಲಿನಲ್ಲಿದ್ದಾರೆ ಎಂದರು.ಮತದಾನ ಹೆಚ್ಚಳಕ್ಕೆ ಕ್ರಮ:
ಪ್ರಸಕ್ತ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಹಲವಾರು ರೀತಿಯಲ್ಲಿ ಕ್ರಮವಹಿಸಲಾಗಿದೆ. ಕಳೆದ ಬಾರಿಗಿಂತಲೂ ಅಧಿಕ ಮತದಾನ ಮಾಡುವ ದಿಸೆಯಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಹೇಳಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಕೊಪ್ಪಳ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಕುಮಾರ ಮಾಲಗಿತ್ತಿ, ಚುನಾವಣಾ ತಹಸೀಲ್ದಾರ ಡಿ. ಮಂಜುನಾಥ, ಜಿಲ್ಲಾಧಿಕಾರಿ ಕಚೇರಿ ಚುನಾವಣಾ ವಿಭಾಗದ ನಾಗರಾಜ, ಪ್ರಸನ್ನ ಸೇರಿದಂತೆ ಮತ್ತಿತರರಿದ್ದರು.