ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ವ್ಯಕ್ತಿತ್ವ ಎಂದಿಗೂ ಭಾರತೀಯ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತದೆ. ಅವರ ಆದರ್ಶಗಳು ನಮಗೆ ದಾರಿ ದೀಪವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ತಿಳಿಸಿದರು.ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶನಿವಾರ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಲ್ಲಮ್ಮ ತಮ್ಮ ನಡತೆಯ ಮೂಲಕ ತಮ್ಮ ಕುಟುಂಬದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದವರು. ಕನ್ನಡದಲ್ಲಿ ಸರ್ವಜ್ಞ ಹೇಗೋ ಹಾಗೆಯೇ ತೆಲುಗಿನಲ್ಲಿ ವೇಮನನ್ನು ಗುರುತಿಸಲಾಗುತ್ತದೆ. ಅಂತಹ ಒಬ್ಬ ಮಹಾನ್ ವ್ಯಕ್ತಿಯನ್ನೇ ಸೃಷ್ಟಿ ಮಾಡಿದವರು ಮಲ್ಲಮ್ಮನವರು ಎಂದರು.
ಕುಟುಂಬದಲ್ಲಿ ಮಾತ್ರ ಅಲ್ಲದೇ ಸಮಾಜದಲ್ಲಿ ಎಲ್ಲರಿಗೂ ಮಾರ್ಗದರ್ಶಕರಾಗಿ ಚೈತನ್ಯವನ್ನು ಬಿತ್ತುತ್ತಿದ್ದರು. ಇಂತಹವರು ನಮ್ಮ ಭಾರತ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರಿಗೂ ಪುಣ್ಯದಾಯಕವಾದಂತಹ ವಿಷಯವಾಗಿದೆ. ಸಮುದಾಯಿಕವಾಗಿ, ಸಾಮಾಜಿಕವಾಗಿ ಎಲ್ಲಾ ರೀತಿಯಲ್ಲೂ ಆದರ್ಶ ಪ್ರಿಯರಾಗಿದ್ದವರು ಮಲ್ಲಮ್ಮ. ಒಂದು ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಮಾನವ ಸಮುದಾಯಕ್ಕೆ ಆದರ್ಶ ಪ್ರಿಯವಾದಂತಹ ಜೀವನವನ್ನು ಕಟ್ಟಿಸಿಕೊಟ್ಟಿದ್ದಾರೆ. ಇಂತಹವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಹುಣಸೂರು ತಾಲೂಕು ಗಾವಡೆಗೆರೆಯ ಓಂಶ್ರೀ ಗುರುಲಿಂಗ ಜಂಗಮ ದೇವರ ಮಠ ಶ್ರೀ ನಟರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ತನ್ನ ಜೀವನದಲ್ಲಿ ಹೇಳಲು ಆಗದಷ್ಟು ಕಷ್ಟಗಳನ್ನು ಅನುಭವಿಸಿದರು ಸಹ ಅವುಗನನ್ನು ಸಂತೋಷವಾಗಿ ಸ್ವೀಕರಿಸಿ ಸಮಾಜಕ್ಕೆ ಮಾದರಿಯ ಜೀವನ ನಡೆಸಿದರು ಎಂದರು.
ಹೃದಯ ಸಂಭದವನ್ನು ಹೊಂದಿದ್ದ ಹೇಮರಡ್ಡಿ ಮಲ್ಲಮ್ಮ ತನ್ನ ನೋವುಗಳನ್ನೆಲ್ಲಾ ತನ್ನ ಹೃದಯಲ್ಲಿ ಇಟ್ಟುಕೊಂಡು ನಿಜವಾದ ವಿಚಾರಗಳನ್ನು ಜಗತ್ತಿಗೆ ಕೊಟ್ಟ ಮಹಾ ತಾಯಿ ಎಂದು ಹೇಳುವುದಕ್ಕೆ ತುಂಬಾ ಸಂತೋಷವಾಗುತ್ತದೆ ಎಂದು ಅವರು ಹೇಳಿದರು.ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷರು ದೇವರಾಜು ಪಿ. ಚಿಕ್ಕಹಳ್ಳಿ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡು ಆ ಪರಂಪರೆಯಲ್ಲಿ ನಡೆದುಕೊಂಡು ಬಂದವರು ಹೇಮರಡ್ಡಿ ಮಲ್ಲಮ್ಮನವರು, ಚೆನ್ನಮಲ್ಲಿಕಾರ್ಜುನ ಪ್ರಸಾದದಿಂದ ಹುಟ್ಟಿದ್ದರಿಂದ ಇವರಿಗೆ ಮಲ್ಲಮ್ಮ ಎಂದು ಹೆಸರಿಡಲಾಯಿತು. ಇವರ ಬದುಕಿನುದ್ದಕ್ಕೂ ಸಾಧಾನೆ ಮಾಡಿಕೊಂಡು ಬಂದವರು. ತಮ್ಮ ತತ್ವ ಆದರ್ಶಗಳನ್ನು ನಾಡಿನ ಉದ್ದಗಲಕ್ಕೂ ಬಿತ್ತುತ್ತಾ ಬಂದಿದ್ದರು. ಪವಾಡ ಮಲ್ಲಮ್ಮ, ಬೆಂಕಿ ಮಲಮ್ಮ ಎಂಬ ಇನ್ನೂ ಅನೇಕ ಹೆಸರಿನಲ್ಲಿ ಕರೆಯಲಾಗುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬಳಗದ ಉಪಾಧ್ಯಕ್ಷ ಶಿವಲಿಂಗಸ್ವಾಮಿ, ಮಹಾಂತೇಶ್ ಮೊದಲಾದವರು ಇದ್ದರು.