ಗದಗ: ರಾಜ್ಯದಲ್ಲಿ 2026ರ ಡಿಜಿಟಲ್ ಜನಗಣತಿಗೆ ಸಿದ್ಧತೆ ನಡೆದಿದ್ದು, ಏಪ್ರಿಲ್‌ನಿಂದ ಮೊದಲ ಹಂತದ ಆರಂಭ ಜನಗಣತಿ ಪ್ರಕ್ರಿಯೆಗೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಜ್ಜಾಗಿದೆ. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಈ ಬೃಹತ್ ಕಾರ್ಯ ಏಪ್ರಿಲ್ ತಿಂಗಳಿನಿಂದ ಆರಂಭವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜನಗಣತಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ(ಆ್ಯಪ್ ಮೂಲಕ) ನಡೆಯಲಿರುವ ಈ ಗಣತಿ ಕಾರ್ಯಕ್ಕಾಗಿ ಜಿಲ್ಲಾದ್ಯಂತ ಅಧಿಕಾರಿಗಳ ತಂಡ ರಚನೆ ಹಾಗೂ ತರಬೇತಿ ಪ್ರಕ್ರಿಯೆಗಳು ಭರದಿಂದ ಸಾಗಿವೆ. ಜನಗಣತಿಯು ಒಟ್ಟು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ನಡೆಯಲಿದೆ. ಎರಡನೇ ಹಂತ 2027ರಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ ಎಂದರು.ಈ ಬಾರಿಯ ಜನಗಣತಿಯ ವಿಶೇಷತೆಯೆಂದರೆ, ಸಾರ್ವಜನಿಕರೇ ಖುದ್ದಾಗಿ ಪೋರ್ಟಲ್ ಮೂಲಕ ತಮ್ಮ ಮಾಹಿತಿಯನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಏ. 1ರಿಂದ ಏ.15ರ ವರೆಗೆ ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಏ. 16ರ ನಂತರ ಗಣತಿದಾರರು ಮನೆ- ಮನೆಗೆ ಭೇಟಿ ನೀಡಿ, ದಾಖಲಾದ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ ಹಾಗೂ ಉಳಿದವರ ಮಾಹಿತಿಯನ್ನು ಆ್ಯಪ್ ಮೂಲಕ ಸಂಗ್ರಹಿಸಲಿದ್ದಾರೆ. ಜಿಲ್ಲಾಡಳಿತ ಸಿದ್ಧತೆ ಮತ್ತು ಅಧಿಕಾರಿಗಳ ನಿಯೋಜನೆ ಜನಗಣತಿಗಾಗಿ ಜಿಲ್ಲಾಧಿಕಾರಿಗಳು ಪ್ರಧಾನ ಜಿಲ್ಲಾ ಗಣತಿ ಅಧಿಕಾರಿಯಾಗಿ ಮತ್ತು ಅಪರ ಜಿಲ್ಲಾಧಿಕಾರಿಗಳು ಜಿಲ್ಲಾ ಗಣತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.ಗಣತಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ತಹಸೀಲ್ದಾರ್(ತಾಲೂಕು ಮಟ್ಟದ ಅಧಿಕಾರಿಗಳು) ಮತ್ತು ಸಂಬಂಧಪಟ್ಟ ಸಿಬ್ಬಂದಿಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಲು ತೀರ್ಮಾನಿಸಲಾಗಿದೆ. ಈ ತರಬೇತಿಯನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಡಿಜಿಟಲ್ ಗಣತಿ ಸಿಬ್ಬಂದಿಗೆ ತರಬೇತಿ ಇದು ಸಂಪೂರ್ಣ ಆ್ಯಪ್ ಆಧರಿತ ಗಣತಿಯಾಗಿರುವುದರಿಂದ, ತಾಂತ್ರಿಕ ನಿರ್ವಹಣೆಗಾಗಿ 19 ಐಟಿ ಸಿಬ್ಬಂದಿಯನ್ನು ನೇಮಿಸಿ ಅವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.ಈ ವೇಳೆ ಉಪ ವಿಭಾಗಾಧಿಕಾರಿ ಗಂಗಪ್ಪ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ನಗರಸಭೆ ಪೌರಯುಕ್ತ ರಾಜರಾಮ ಪವಾರ, ಬಸವರಾಜ ಪಾಟೀಲ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ರಂಜೀತ ಕುಮಾರ, ಎಸ್.ಎಂ. ಕಲ್ಲೂರು ಸೇರಿದಂತೆ ಅಧಿಕಾರಿಗಳು ಇದ್ದರು. ಬಿ.ಜಿ. ಗಿರಿತಿಮ್ಮಣ್ಣವರ ನಿರೂಪಿಸಿದರು.