ಜಿಲ್ಲೆಗೆ ಆಲಮಟ್ಟಿ, ಹಿಪ್ಪರಗಿ ಪ್ರವಾಹ ಭೀತಿ

| Published : Jul 23 2024, 12:42 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜಿಲ್ಲೆಯ ವಿವಿಧ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ ಪ್ರವಾಹ ಬಾಧಿತ ಆಗಲಿರುವ ಗ್ರಾಮಗಳಿಗೆ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ವಿವಿಧ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ ಪ್ರವಾಹ ಬಾಧಿತ ಆಗಲಿರುವ ಗ್ರಾಮಗಳಿಗೆ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರು.

ಬಾಗಲಕೋಟೆ ತಾಲೂಕಿನ ಪ್ರವಾಹ ಬಾಧಿತ ಒಳಗಾಗಲಿರುವ ಗ್ರಾಮಗಳಾದ ರಾಂಪೂರ, ನಾಯನೇಗಲಿ, ಮಂಕಣಿ, ಡೊಮನಾಳ ಹಾಗೂ ಚಿಕ್ಕಮ್ಯಾಗೇರಿ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಪ್ರವಾಹ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದರು. ಹಿಪ್ಪರಗಿ ಮತ್ತು ಆಲಮಟ್ಟಿ ಜಲಾಶಯದ ಒಳ ಹರಿವಿನ ಮಟ್ಟ ಹೆಚ್ಚಾಗುತ್ತಿದೆ. ಈ ಪ್ರಮಾಣ ಹಂತ ಹಂತವಾಗಿ ಹೆಚ್ಚಾದಲ್ಲಿ ಪ್ರವಾಹ ಭೀತಿ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ ಮಾಡಿಕೊಂಡರು.

ಕಾಳಜಿ ಕೇಂದ್ರಗಳ ವೀಕ್ಷಣೆ:

ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಬಾಧಿತವಾಗಲಿರುವ ಗ್ರಾಮಗಳಲ್ಲಿ ಜಿಲ್ಲಾಡಳಿತದಿಂದ ಕೈಗೊಂಡ ಮುಂಜಾಗ್ರತಾ ಕ್ರಮ ಹಾಗೂ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಪ್ರವಾಹ ಉಂಟಾದಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರ ಸ್ಥಳಾಂತರಕ್ಕೆ ಎಲ್ಲ ರೀತಿಯ ಸಿದ್ದತೆ ಕೈಗೊಳ್ಳಲು ಸೂಚಿಸಿದರು. ತಾವು ಕೈಗೊಂಡ ಸಿದ್ದತೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಂಕಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಬಿಸಿ ಊಟದ ಕೊಠಡಿಗೆ ತೆರಳಿ ಪರಿಶೀಲಿಸಿದರು.

ಆಲಮಟ್ಟಿಯಿಂದ 1.50 ಲಕ್ಷ ಕ್ಯುಸೆಕ್‌ ಹೊರಕ್ಕೆ:

ಆಲಮಟ್ಟಿ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಈ ಪ್ರಮಾಣ 2.50 ಕ್ಯುಸೆಕ್‌ ಆದಲ್ಲಿ ಪ್ರವಾಹ ಸಾಧ್ಯತೆ ಹೆಚ್ಚಾಗಿರುತ್ತದೆ. ಹುನಗುಂದ ತಾಲೂಕಿನ ಬಾಧಿತಗೊಳ್ಳುವ ಕಡಗೂರು, ತುರಡಿಹಾಳ, ಬಿಸಲದಿನ್ನಿ, ವಳಕಲದಿನ್ನಿ, ಕೂಡಲಸಂಗಮ ಗ್ರಾಮಗಳಿಗೆ ಸಹ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಕೆಂಗಲ್ ಕಡಪಟ್ಟಿ ಶಾಲೆಗೆ ತೆರಳಿದ ಡಿಸಿ ವ್ಯವಸ್ಥೆ ಪರಿಶೀಲಿಸಿದರು. ನಂತರ ವಡಗೋಡದಿನ್ನಿ, ಹೂವನೂರು, ನಂದನೂರು, ಹಂಜಿಹಾಳ, ಚಿಕ್ಕಮಳಗಾವಿ, ಚಿಕ್ಕಮಾಗಿ, ಹಿರೇಮಾಗಿ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಭೇಟಿ ವೇಳೆ ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್‌ ಅಮರೇಶ ಪಮ್ಮಾರ, ನಿಂಗಪ್ಪ ಬಿರಾದಾರ, ಕಂದಾಯ ನಿರೀಕ್ಷಕ ಡಿ.ಎಸ್.ಯತ್ನಟ್ಟಿ, ಕಮತಗಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಚ್.ಎಫ್.ಹುಲ್ಲಿಕೇರಿ ಸೇರಿದಂತೆ ಇತರರು ಇದ್ದರು.

----------------------------

ಬಾಕ್ಸ್ .

ಸುರಕ್ಷಿತ ಸ್ಥಳಕ್ಕೆ ತೆರಳಲು ಡಿಸಿ ಮನವಿ

ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿಪ್ಪರಗಿ ಜಲಾಶಯ ಹಾಗೂ ಆಲಮಟ್ಟಿ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಪ್ರಾರಂಭವಾಗಿದೆ. ಆಲಮಟ್ಟಿ ಜಲಾಶಯದ ಅಧಿಕಾರಿಗಳ ವರದಿಯನ್ವಯ ಪ್ರಸ್ತುತ ಒಳಹರಿವು 1.25 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚಿದೆ. ಹೊರ ಹರಿವು 1.50 ಲಕ್ಷ ಕ್ಯುಸೆಕ್‌ ಇದ್ದು, ಇದು ಹಂತ ಹಂತವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಆಲಮಟ್ಟಿ ಜಲಾಶಯದಿಂದ ಸುಮಾರು 2 ಲಕ್ಷದಿಂದ 2.5 ಲಕ್ಷ ಕ್ಯುಸೆಕ್ಸ್ ನೀರು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಕಾರಣ ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯಗಳ ವ್ಯಾಪ್ತಿಗೆ ಬರುವ ಬಾಗಲಕೋಟೆ ಜಿಲ್ಲೆಯ ನದಿ ದಡದ ಗ್ರಾಮಗಳ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು ಹಾಗೂ ಯಾರು ನದಿಗೆ ಇಳಿಯದಂತೆ ಮುನ್ನಚ್ಚರಿಕೆ ವಹಿಸಲು ಜಿಲ್ಲಾಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.----------------------