ಯುವನಿಧಿ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಸಲಹೆ

| Published : Jan 09 2024, 02:00 AM IST

ಸಾರಾಂಶ

ಬಾಗಲಕೋಟೆ: ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಯುವನಿಧಿ ಯೋಜನೆ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿತು. ಡಿಸಿ ಜಾನಕಿ ಕೆ.ಎಂ. ಮಾತನಾಡಿ, ಜಿಲ್ಲೆಯಲ್ಲಿರುವ ಪ್ರತಿ ಪದವಿ ಹಾಗೂ ಡಿಪ್ಲೊಮಾ ಕಾಲೇಜಿನಲ್ಲಿ 2023ರ ಜನವರಿ 1ರಿಂದ ಪಾಸಾದ ವಿದ್ಯಾರ್ಥಿಗಳು ಈ ಯೋಜನೆಯಡಿ ಹೆಸರು ನೋಂದಾಯಿಸಲು ಅರ್ಹರಾಗಿದ್ದು, ಅರ್ಹ ವಿದ್ಯಾರ್ಥಿಗಳ ಮಾಹಿತಿ ಕ್ರೋಡೀಕರಿಸಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯು ಜಿಲ್ಲೆಯಲ್ಲಿ ಶೇ.100ರಷ್ಟು ಸಮರ್ಪಕ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಯೋಜನೆ ಅನುಷ್ಠಾನ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿರುವ ಪ್ರತಿ ಪದವಿ ಹಾಗೂ ಡಿಪ್ಲೊಮಾ ಕಾಲೇಜಿನಲ್ಲಿ 2023ರ ಜನವರಿ 1ರಿಂದ ಪಾಸಾದ ವಿದ್ಯಾರ್ಥಿಗಳು ಈ ಯೋಜನೆಯಡಿ ಹೆಸರು ನೋಂದಾಯಿಸಲು ಅರ್ಹರಾಗಿದ್ದು, ಅರ್ಹ ವಿದ್ಯಾರ್ಥಿಗಳ ಮಾಹಿತಿ ಕ್ರೋಡೀಕರಿಸಿ ಮಾಹಿತಿ ನೀಡಬೇಕು ಎಂದರು.

ಕಾಲೇಜು ಹಂತದಲ್ಲಿ ಅರ್ಹ ನಿರುದ್ಯೋಗಿಗಳ ಪಟ್ಟಿ ದೊರೆತಲ್ಲಿ ಅವರೆಲ್ಲರನ್ನು ಎನ್ಎಡಿ ಪೋರ್ಟಲ್ ನಲ್ಲಿ ನೋಂದಣಿ ಮಾಡಲು ಅನುಕೂಲವಾಗುತ್ತದೆ. ನಿಮ್ಮ ಹಂತದಲ್ಲಿ ತಾಂತ್ರಿಕ ತೊಂದರೆಯಿಂದ ನೋಂದಣಿ ಆಗದಿದ್ದಲ್ಲಿ ಅದರ ಮಾಹಿತಿ ನೀಡಿದಲ್ಲಿ ನೋಂದಣಿಗೆ ಕ್ರಮವಹಿಸಲಾಗುವುದು. ಯುವನಿಧಿ ಯೋಜನೆಗೆ ಸರ್ಕಾರ ನಿಗದಿಪಡಿಸಿದ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಜಿಲ್ಲೆಯ ಪ್ರತಿಯೊಂದು ಕಾಲೇಜಿನ ಪ್ರಾಚಾರ್ಯರು ಎರಡು ದಿನಗಳ ಒಳಗಾಗಿ ಮಾಹಿತಿ ನೀಡಿದಲ್ಲಿ ನೋಂದಣಿಗೆ ಕಾಲೇಜುವಾರು ಶಿಬಿರ ಏರ್ಪಡಿಸಲಾಗುವುದು. ಪ್ರತಿ ಕಾಲೇಜಿಗೆ ಓರ್ವ ನೋಡಲ್ ಅಧಿಕಾರಿ ನೇಮಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಯಲ್ಲಿ ಈಗಾಗಲೇ 2802 ಜನ ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಜನ ಯೋಜನೆಗೆ ಒಳಪಡಲಿದ್ದಾರೆಂಬುದು ಮಾಹಿತಿ ಸಿಗಬೇಕಿದೆ. ಈ ನಿಟ್ಟಿನಲ್ಲಿ ಪ್ರಾಚಾರ್ಯರು ತಮ್ಮ ಕಾಲೇಜುವಾರು 2023ರಲ್ಲಿ ತೇರ್ಗಡೆಹೊಂದಿದ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳ ಮಾಹಿತಿ ನೀಡಬೇಕು. ಅಂದಾಗ ಮಾತ್ರ ಈ ಪೈಕಿ ನೋಂದಣಿ ಎಷ್ಟು ಆಗಿವೆ. ಇನ್ನೂ ಎಷ್ಟು ಆಗಬೇಕೆಂಬುದು ಗೊತ್ತಾಗುತ್ತದೆ. ಇದರಿಂದ ಶೇ,100ರಷ್ಟು ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರ ಸಹ ಈ ಯೋಜನೆ ಪ್ರಕ್ರಿಯೆ ಬಗ್ಗೆ ಪ್ರತಿದಿನ ಮೌಲ್ಯಮಾಪನ ಮಾಡುತ್ತಿದೆ. ಯುವನಿಧಿ ಯೋಜನೆಯಡಿ ನೋಂದಣಿಯಾದಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಯುವಜನತೆಗೆ ಅನುಕೂಲವಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಾಚಾರ್ಯರು ಅರ್ಹ ವಿದ್ಯಾರ್ಥಿಗಳ ನೋಂದಣಿಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹಿರೇಮಠ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಕಾಲೇಜಿನ ಪ್ರಾಚಾರ್ಯರು ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು.