ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಆಗಸ್ಟ್ 2 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ -3 ನಡೆಯಲಿದ್ದು, ವಿದ್ಯಾರ್ಥಿಗಳನ್ನು ಉತ್ತೀರ್ಣರಾಗುವಂತೆ ಪರಿಣಾಮಕಾರಿಯಾಗಿ ಸಜ್ಜುಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ- 2ರ ಫಲಿತಾಂಶ ವಿಶ್ಲೇಷಣೆ ಹಾಗೂ ಪರೀಕ್ಷೆ -3ರ ಮಾರ್ಗದರ್ಶನ ಸಂಬಂಧ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ-2 ನೇ ಹಂತದ ಪರೀಕ್ಷೆಯಲ್ಲಿ ಒಟ್ಟು 5830 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಅದರಲ್ಲಿ 2092 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 35.88 ರಷ್ಟು ಫಲಿತಾಂಶ ಬಂದಿದೆ. ಕೆ.ಆರ್.ಪೇಟೆ ತಾಲೂಕು- ಶೇ. 39.21, ಮದ್ದೂರು- ಶೇ.40.74, ಮಳವಳ್ಳಿ- ಶೇ.38.04, ಮಂಡ್ಯ ಉತ್ತರ ವಲಯ- ಶೇ.48.33, ಮಂಡ್ಯ ದಕ್ಷಿಣ ವಲಯ- ಶೇ. 20.17, ನಾಗಮಂಗಲ- ಶೇ.34.69, ಪಾಂಡವಪುರ - ಶೇ.24.67, ಶ್ರೀರಂಗಪಟ್ಟಣ ತಾಲೂಕಿನಲ್ಲಿ- ಶೇ. 33.69 ರಷ್ಟು ಫಲಿತಾಂಶ ಬಂದಿದೆ. ಉಳಿದ 3738 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, 3ನೇ ಹಂತದ ಪರೀಕ್ಷೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಉತ್ತೀರ್ಣರಾಗಲು ಅಗತ್ಯ ಕ್ರಮಕೈಗೊಳ್ಳಿ ಎಂದು ತಿಳಿಸಿದರು.ಎಸ್ಸೆಸ್ಸೆಲ್ಸಿ-2ನೇ ಪರೀಕ್ಷೆಯಲ್ಲಿಯೂ ಉತ್ತಮ ಫಲಿತಾಂಶ ಬಂದಿರುವುದಿಲ್ಲ. ಇದಕ್ಕೆ ಶಿಕ್ಷಕರ ಬೇಜವಾಬ್ದಾರಿತನವೇ ಕಾರಣ. ಆದ್ದರಿಂದ ಈ ಬಾರಿಯೂ ಕೂಡ ಇದು ಪುನರಾವರ್ತಿತವಾಗದಂತೆ 3ನೇ ಪರೀಕ್ಷೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ನೀಡಿ ಉನ್ನತ ಮಟ್ಟದಲ್ಲಿ ಫಲಿತಾಂಶ ಬರುವಂತೆ ಮಾಡಬೇಕು. ಎಸ್ಸೆಸ್ಸೆಲ್ಸಿ-2 ನೇ ಪರೀಕ್ಷೆಗೆ ಗೈರಾದ ಮಕ್ಕಳ ಪೋಷಕರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿ, ಮನವೊಲಿಸಿ 3 ನೇ ಪರೀಕ್ಷೆಗೆ ಹಾಜರಾಗುವಂತೆ ತಿಳಿ ಹೇಳಬೇಕು ಎಂದರು.
ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ, ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಿ ಪರೀಕ್ಷೆಯಲ್ಲಿ ಗೈರಾದ ಹಾಗೂ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಎಂದರು.ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಮಾತನಾಡಿ, 2024-25ನೇ ಸಾಲಿಗೆ ಸಂಬಂಧಿಸಿದಂತೆ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಯೂನಿಟ್ ಟೆಸ್ಟ್ ನ್ನು ಕಡ್ಡಾಯವಾಗಿ ನಡೆಸಬೇಕು. ಯೂನಿಟ್ ಟೆಸ್ಟ್ ಫಲಿತಾಂಶದಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಹೆಚ್ಚಿನ ಆದ್ಯತೆ ನೀಡಿ ಮಂದಿನ ಯೂನಿಟ್ ಟೆಸ್ಟ್‌ಗಳಲ್ಲಿ ಉತ್ತೀರ್ಣರಾಗುವಂತೆ ಸಜ್ಜುಗೊಳಿಸಬೇಕು. ಇದರಿಂದ 2025ರಲ್ಲಿ ನಡೆಯುವ ಪರೀಕ್ಷೆಯಲ್ಲಿ ಜಿಲ್ಲೆಯು ಉತ್ತಮ ಫಲಿತಾಂಶ ಗಳಿಸಬಹುದು ಎಂದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಶಿವರಾಮೇಗೌಡ, ಡಯಟ್ ಪ್ರಾಂಶುಪಾಲರಾದ ಪುರುಷೋತ್ತಮ, ಬಿಇಒ ಮಹದೇವ, ಕೆ.ಟಿ.ಸೌಭಾಗ್ಯ, ಚಂದ್ರಶೇಖರ್, ಕಾಳೀರಯ್ಯ, ಶಿಕ್ಷಣಾಧಿಕಾರಿಗಳಾದ ಚಂದ್ರಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.