ಚಾಮರಾಜನಗರದ ನಿರ್ಮಿತಿ ಕೇಂದ್ರದಲ್ಲಿ ಇ-ಆಫೀಸ್ ವ್ಯವಸ್ಥೆಗೆ ಜಿಲ್ಲಾಧಿಕಾರಿ ಚಾಲನೆ

| Published : Dec 19 2024, 12:33 AM IST

ಚಾಮರಾಜನಗರದ ನಿರ್ಮಿತಿ ಕೇಂದ್ರದಲ್ಲಿ ಇ-ಆಫೀಸ್ ವ್ಯವಸ್ಥೆಗೆ ಜಿಲ್ಲಾಧಿಕಾರಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಚಾಮರಾಜನಗರದ ನಿರ್ಮಿತಿ ಕೇಂದ್ರದಲ್ಲಿ ಇ-ಆಫೀಸ್ ತಂತ್ರಾಂಶಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ನಿರ್ಮಿತಿ ಕೇಂದ್ರದಲ್ಲಿ ಇ-ಆಫೀಸ್ ತಂತ್ರಾಂಶಕ್ಕೆ ಚಾಲನೆ ನೀಡಿದರು. ತಾಲೂಕಿನ ಮಂಗಲ ಗ್ರಾಮದಲ್ಲಿರುವ ನಿರ್ಮಿತಿ ಕೇಂದ್ರದ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕಂಪ್ಯೂಟರ್ ಬಟನ್ ಒತ್ತುವ ಮೂಲಕ ಇ-ಆಫೀಸ್ ತಂತ್ರಾಂಶ ವ್ಯವಸ್ಥೆಯನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಸರ್ಕಾರಿ ಕಚೇರಿ ಕೆಲಸ-ಕಾರ್ಯಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅಳವಡಿಸಲಾಗುತ್ತಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಇ-ಆಫೀಸ್ ವ್ಯವಸ್ಥೆ ಅಳವಡಿಕೆಯಲ್ಲಿ ಚಾಮರಾಜನಗರ ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗಳಲ್ಲಿ ಇ-ಆಫೀಸ್ ವ್ಯವಸ್ಥೆ ಜಾರಿಯಲ್ಲಿದೆ. ನಮ್ಮ ಜಿಲ್ಲೆಯ ಎಲ್ಲ 16 ನಾಡಕಚೇರಿಗಳಲ್ಲಿಯೂ ಇ-ಆಫೀಸ್ ತಂತ್ರಾಂಶ ವ್ಯವಸ್ಥೆಯನ್ನು ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಸರ್ಕಾರದ ನಿರ್ದೇಶನದ ಮೇರೆಗೆ ನಿರ್ಮಿತಿ ಕೇಂದ್ರದಲ್ಲಿ ಇ-ಆಫೀಸ್ ತಂತ್ರಾಂಶವನ್ನು ಹೊಸ ಲಾಗಿನ್ ಐಡಿ ಸೃಜಿಸಿ ಜಾರಿಗೊಳಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಬಳಿಕ ಸಂಪೂರ್ಣ ಇ-ಆಫೀಸ್ ತಂತ್ರಾಂಶ ಅಳವಡಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯ ನಿರ್ಮಿತಿ ಕೇಂದ್ರ ರಾಜ್ಯದಲ್ಲಿಯೇ 2ನೇ ನಿರ್ಮಿತಿ ಕೇಂದ್ರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇ-ಆಫೀಸ್ ತಂತ್ರಾಂಶ ಅನುಷ್ಠಾನದಿಂದ ಜನಸಾಮಾನ್ಯರು ಸೌಲಭ್ಯ ಪಡೆಯಲು ಹಾಕಿದ ಅರ್ಜಿಗೆ ಸಂಬಂಧಿಸಿದ ಕಡತ ಯಾವ ಹಂತದಲ್ಲಿ ಬಾಕಿ ಇದೆ. ವಿಲೇವಾರಿಗೆ ಎಷ್ಟು ದಿನದಿಂದ ಬಾಕಿ ಇದೆ ಎಂಬುದು ತಿಳಿಯಲಿದೆ. ಸಂಸದರು, ಶಾಸಕರ ಅನುದಾನದಡಿ ಬರುವ ಕಾಮಗಾರಿಗಳು, ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನೆ, ಇತರೆ ವರದಿಗಳನ್ನು ಟ್ರ್ಯಾಕ್ ಮಾಡಲು ಅನುಕೂಲವಾಗಲಿದೆ. ಇದರಿಂದ ಆಡಳಿತದಲ್ಲಿ ಸುಧಾರಣೆ ಕಾಣಲಿದೆ. ಹಾಗೆಯೇ ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು.

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕಿ ಮಂಜುಳ, ಉಪವ್ಯವಸ್ಥಾಪಕ ವೃಷಭೇಂದ್ರ, ರವಿಕುಮಾರ್ ಇತರರು ಇದ್ದರು. ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಇ-ಆಡಳಿತ ಸಮಾಲೋಚಕ ಮಧುಕೇಶ್ ಅವರು ತಂತ್ರಾಂಶ ವ್ಯವಸ್ಥೆಯ ಅನುಷ್ಠಾನ ಕುರಿತು ನಿರ್ಮಿತಿ ಕೇಂದ್ರದ ಅಧಿಕಾರಿ, ಸಿಬ್ಬಂದಿಗೆ ಸವಿವರ ಮಾಹಿತಿಯನ್ನು ಪವರ್ ಪಾಯಿಂಟ್ ಮೂಲಕ ವಿವರಿಸಿದರು.