ಮೈಸೂರು ಸಕ್ಕರೆ ಕಂಪನಿಯ ಉದ್ಯಾನವನದಲ್ಲಿ ಟ್ರೀ-ಪಾರ್ಕ್ ನಿರ್ಮಾಣ ಸಂಬಂಧ ಪರಿಶೀಲಿಸಿ ಅತಿ ಜರೂರಾಗಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ಸಕ್ಕರೆ ಕಂಪನಿಯ ಉದ್ಯಾನವನದಲ್ಲಿ ಟ್ರೀ-ಪಾರ್ಕ್ ನಿರ್ಮಾಣ ಸಂಬಂಧ ಪರಿಶೀಲಿಸಿ ಅತಿ ಜರೂರಾಗಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಸಲ್ಲಿಸಿರುವ ಮನವಿಯಲ್ಲಿ ಕಾರ್ಖಾನೆಯ ಉದ್ಯಾನಕ್ಕೆ ಮೀಸಲಿಟ್ಟ ೧೪ ಎಕರೆ ೬ ಗುಂಟೆ ಜಮೀನಿನಲ್ಲಿ ಟ್ರೀ-ಪಾರ್ಕ್ ನಿರ್ಮಿಸುವ ಬಗ್ಗೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಪ್ರತಿ ತಾಲೂಕಿಗೆ ಅರಣ್ಯ ಇಲಾಖೆಯಿಂದ ಟ್ರೀ-ಪಾರ್ಕ್ ನಿರ್ಮಾಣ ಮಾಡಲು ಏಳೂವರೆ ಎಕರೆ ಮಾತ್ರ ಸರ್ಕಾರಿ ಜಮೀನು ಬೇಕಿದೆ. ಆದರೆ, ಮೈಷುಗರ್ ಕಾರ್ಖಾನೆಯ ಉದ್ಯಾನವನದ ಉದ್ದೇಶಕ್ಕೆ ೧೯೩೭ರಲ್ಲಿ ರೈತರಿಂದ ಭೂ ಸ್ವಾಧೀನವಾಗಿರುವ ೧೪ ಎಕರೆ ೬ ಗುಂಟೆ ಜಮೀನಿನಲ್ಲಿ ಟ್ರೀ-ಪಾರ್ಕ್ ನಿರ್ಮಾಣಕ್ಕೆ ಅನುದಾನ ಲಭ್ಯವಿರುವುದಾಗಿ ತಿಳಿಸಿದ್ದಾರೆ.

ಉದ್ಯಾನವನದ ರಸ್ತೆ ೭೦ ರಿಂದ ೮೦ ಅಡಿಗಿಂತ ಹೆಚ್ಚಿನ ಅಗಲವಿದ್ದು ಮಂಡ್ಯ ನಗರ ಮತ್ತು ಸುತ್ತಮುತ್ತಲ ಜನರಿಗೆ ಉಪಯೋಗವಾಗುವುದರಿಂದ ಅರಣ್ಯ ಇಲಾಖೆ ವತಿಯಿಂದ ಟ್ರೀ-ಪಾರ್ಕ್‌ಡಲು ಉದ್ಯಾನವನದ ಜಾಗವನ್ನು ಮೀಸಲಿಟ್ಟು ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ರವೀಂದ್ರ ಕೋರಿದ್ದು, ಈ ಅಂಶಗಳ ಕುರಿತಂತೆ ಪರಿಶೀಲಿಸಿ ಅತಿ ಜರೂರಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಉದ್ಯಾನವನದ ಉದ್ದೇಶಕ್ಕಾಗಿಯೇ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದರಿಂದ ಅಲ್ಲಿ ಈಗಾಗಲೇ ೭೦ ರಿಂದ ೮೦ ವರ್ಷ ಹಳೆಯದಾದ ಮರಗಳು ಬೆಳೆದು ನಿಂತಿರುವುದು ಟ್ರೀ-ಪಾರ್ಕ್ ನಿರ್ಮಾಣಕ್ಕೆ ಪೂರಕ ವಾತಾವರಣವಿದೆ. ಹಿಂದೆ ಇದೇ ಜಾಗದಲ್ಲಿ ಕಾರಂಜಿಗಳಿಂದ ಕೂಡಿದ್ದ ಹಾಗೂ ವಿದ್ಯುತ್ ದೀಪಗಳ ಅಳವಡಿಕೆಯಿಂದ ನಿತ್ಯ ನೂರಾರು ಜನರು ಉದ್ಯಾನವನಕ್ಕೆ ಬಂದು ಹೋಗುತ್ತಿದ್ದ ನಿದರ್ಶನಗಳಿವೆ. ಹಾಗಾಗಿ ಟ್ರೀ-ಪಾರ್ಕ್ ನಿರ್ಮಾಣ ಮಂಜೂರಾಗಿರುವ ಒಂದು ಕೋಟಿ ರು. ಜಾಗದ ಕೊರತೆಯ ಕಾರಣಕ್ಕೆ ವಾಪಸ್ ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸುವಂತೆ ತಿಳಿಸಿದ್ದಾರೆ.