ಗೌರಿ-ಗಣೇಶ ಹಬ್ಬ: ಅಗತ್ಯ ಸೌಲಭ್ಯ ಒದಗಿಸಿ

| Published : Aug 17 2025, 01:39 AM IST

ಗೌರಿ-ಗಣೇಶ ಹಬ್ಬ: ಅಗತ್ಯ ಸೌಲಭ್ಯ ಒದಗಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಮುಂಬರುವ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪನೆ, ವಿಸರ್ಜನೆ, ಉತ್ಸವದಂತಹ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಅನುಮತಿ ನೀಡುವ ಜೊತೆಗೆ ಹಬ್ಬದ ಸಂದರ್ಭದಲ್ಲಿ ಸುರಕ್ಷತೆ ಹಾಗೂ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜಿಲ್ಲೆಯಲ್ಲಿ ಮುಂಬರುವ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪನೆ, ವಿಸರ್ಜನೆ, ಉತ್ಸವದಂತಹ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಅನುಮತಿ ನೀಡುವ ಜೊತೆಗೆ ಹಬ್ಬದ ಸಂದರ್ಭದಲ್ಲಿ ಸುರಕ್ಷತೆ ಹಾಗೂ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಗೌರಿ ಗಣೇಶೋತ್ಸವ ಆಚರಣೆ ಸಂಬಂಧ ಅಧಿಕಾರಿಗಳು ಹಾಗೂ ನಗರದ ಶ್ರೀ ವಿದ್ಯಾಗಣಪತಿ ವಿದ್ಯಾಮಂಡಳಿ ಪದಾಧಿಕಾರಿಗಳು, ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೌರಿ ಗಣೇಶ ಪ್ರತಿಷ್ಠಾಪಿಸುವ ಆಯೋಜಕರಿಗೆ ಅನುಮತಿ ನೀಡುವ ಸಲುವಾಗಿ ಅಧಿಕಾರಿಗಳನ್ನೊಳಗೊಂಡ ಏಕಗವಾಕ್ಷಿ ಸಮಿತಿ ರಚಿಸಲಾಗಿದೆ. ಕಾರ್ಯಕ್ರಮಗಳ ಆಯೋಜಕರು ಆಯಾ ತಾಲೂಕು ವ್ಯಾಪ್ತಿಯ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕಿದೆ. ಆಯೋಜಕರು ಅರ್ಜಿ ಸಲ್ಲಿಸಿದ ಕೂಡಲೇ ಪರಿಶೀಲಿಸಿ ತ್ವರಿತವಾಗಿ ಅನುಮತಿ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು. ಇ-ಮೇಲ್ ಮೂಲಕವು ಅರ್ಜಿ ಸಲ್ಲಿಸಿದ್ದಲ್ಲಿ ಪರಿಗಣಿಸಿ ಅನುಮತಿಸಬೇಕು ಎಂದರು.

ಗಣೇಶ ಪ್ರತಿಷ್ಠಾಪನೆ, ವಿಸರ್ಜನೆ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು. ಗಣಪತಿ ವಿಸರ್ಜನೆಗಾಗಿ ನಿಗದಿ ಮಾಡಿರುವ ಸ್ಥಳಗಳಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು. ಗಣಪತಿ ಮೆರವಣಿಗೆ ಮಾರ್ಗಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಬ್ಬದ ವೇಳೆ ಕುಡಿಯುವ ನೀರು, ವಿದ್ಯುತ್, ಸ್ವಚ್ಚತೆ, ಸುರಕ್ಷತೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು ಎಂದು ಅವರು ತಿಳಿಸಿದರು.

ಈ ಹಿಂದಿನ ವರ್ಷದಲ್ಲಿಯೂ ನಗರದಲ್ಲಿ ವಿದ್ಯಾಗಣಪತಿ ಮಂಡಳಿಯವರು ಪ್ರತಿಷ್ಠಾಪಿಸಿದ್ದ ಗಣಪತಿ ಕಾರ್ಯಕ್ರಮ ಹಾಗೂ ಉತ್ಸವ ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಜಿಲ್ಲಾಡಳಿತ ಪೊಲೀಸ್ ಇಲಾಖೆ ಎಲ್ಲ ಸಹಕಾರ ನೀಡಲಿದೆ. ಗಣಪತಿ ವಿಸರ್ಜನೆಗೆ ದೊಡ್ಡರಸನಕೊಳದಲ್ಲಿ ಅಗತ್ಯ ಸಿದ್ದತೆಗೆ ನಗರಸಭೆ ಅಧಿಕಾರಿಗಳು ಎಲ್ಲ ಕ್ರಮಗಳನ್ನು ಮುಂಚಿತವಾಗಿಯೇ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಕಳೆದ ವರ್ಷ ನಗರದ ವಿದ್ಯಾಗಣಪತಿ ಮಂಡಳಿಯವರು ಸಹಕಾರ ನೀಡಿ ಗಣಪತಿ ಉತ್ಸವವನ್ನು ಕೈಗೊಂಡಿದ್ದರು. ಈ ಬಾರಿಯೂ ಗಣಪತಿ ಪ್ರತಿಷ್ಠಾಪನೆ ಮೆರವಣಿಗೆ ಸೇರಿದಂತೆ ಉತ್ಸವಕ್ಕೆ ನಮ್ಮ ಕಡೆಯಿಂದ ಎಲ್ಲ ಸಹಕಾರ ನೀಡಲಿದ್ದೇವೆ. ಪೊಲೀಸ್ ಇಲಾಖೆ ವತಿಯಿಂದ ಕೈಗೊಳ್ಳಬೇಕಿರುವ ಸಿದ್ದತೆಗಳನ್ನು ಮಾಡಲಿದ್ದೇವೆ ಎಂದರು.

ಸಭೆಯಲ್ಲಿ ಹಾಜರಿದ್ದ ಮಂಡಳಿಯ ಪದಾಧಿಕಾರಿಗಳು, ಮುಖಂಡರು ಮಾತನಾಡಿ ಕಳೆದ ಬಾರಿಯೂ ಶಾಂತಿಯುತವಾಗಿ ಗಣೇಶ ಉತ್ಸವ ನಗರದಲ್ಲಿ ಜರುಗಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಸಲವು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ನವರಾತ್ರಿಗೂ ಮೊದಲು ವಿಸರ್ಜನೆ ಕಾರ್ಯವನ್ನು ಹಮ್ಮಿಕೊಳ್ಳಲಿದ್ದೇವೆ. ರಸ್ತೆ ಸೌಕರ್ಯ, ಸ್ವಚ್ಚತೆ, ಬೀದಿ ದೀಪ, ವಿಸರ್ಜನಾ ಸ್ಥಳದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಡಿವೈಎಸ್‌ಪಿ ಲಕ್ಷ್ಮಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್, ಜಿಲ್ಲಾ ನಗರಾಭಿವೃದ್ದಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಅಲ್ತಾಫ್, ತಹಶೀಲ್ದಾರರಾದ ಬಸವರಾಜು, ತನ್ಮಯ್, ನಗರಸಭಾ ಆಯುಕ್ತರಾದ ಎಸ್.ವಿ. ರಾಮದಾಸ್, ರಮೇಶ್, ಇನ್ನಿತರ ಅಧಿಕಾರಿಗಳು, ಗಣಪತಿ ಮಂಡಳಿಯ ಪದಾಧಿಕಾರಿಗಳಾದ ಬಾಲಸುಬ್ರಹ್ಮಣ್ಯ, ಮಹೇಶ್, ಶಿವಣ್ಣ, ಚಂದ್ರು, ಮನೋಜ್ ಪಟೇಲ್, ರಾಘವೇಂದ್ರ, ಬಂಗಾರು, ಶಿವು, ಕಿರಣ್, ಮಾದಣ್ಣ, ಪೃಥ್ವಿರಾಜ್, ನವೀನ್, ಅಶ್ವಿನ್, ಕೂಸಣ್ಣ, ಪ್ರವೀಣ್, ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.