ಸಾರಾಂಶ
ತುಮಕೂರು ನಗರ ಹಾಗೂ ಗುಬ್ಬಿ ಪಟ್ಟಣದ ವಲ್ನರಬಲ್ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ತುಮಕೂರು ನಗರ ಹಾಗೂ ಗುಬ್ಬಿ ಪಟ್ಟಣದ ವಲ್ನರಬಲ್ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ನಡೆಸುವ ನಿಟ್ಟಿನಲ್ಲಿ, ವಲ್ನರಬಲ್ ಮತಗಟ್ಟೆಗಳು ಹಾಗೂ ಕೆಲ ಪ್ರದೇಶಗಳಿಗೆ ತೆರಳಿ ಪರಿಶೀಲಿಸಿ, ಪ್ರತಿಯೊಬ್ಬರೂ ನಿರ್ಭೀತಿಯಿಂದ ಮತದಾನ ಮಾಡುವಂತೆ ನೆರೆದಿದ್ದವರಲ್ಲಿ ಮನವಿ ಮಾಡಿದರು. ಮೊದಲಿಗೆ ಶಾರದಾದೇವಿನಗರ ಪ್ರದೇಶದ ಸಾರ್ವಜನಿಕರನ್ನು ಭೇಟಿ ಮಾಡಿದ ಅವರು, ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ಶೇ. 40ಕ್ಕೂ ಹೆಚ್ಚು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ನಂತರ ಅಗ್ರಹಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಲ್ನರಬಲ್ ಮತಗಟ್ಟೆ ಸಂಖ್ಯೆ ೩೩ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳಿಗೆ ಸುಲಲಿತ ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು. ನಂತರ ಜಯಪುರ, ಮರಳೂರು, ಕೆಸರುಮಡು ವಲ್ನರಬಲ್ ಮತಗಟ್ಟೆಗಳ ಮತದಾರರನ್ನು ಮಾತನಾಡಿಸಿದ ಅವರು, ಮತಗಟ್ಟೆಗಳ ಸಂಖ್ಯೆ ಪರಿಶೀಲಿಸಿಕೊಳ್ಳುವಂತೆ, 18 ವರ್ಷ ಮೇಲ್ಪಟ್ಟವರು ತಮ್ಮ ಮನೆಯಲ್ಲಿದ್ದರೆ ತಪ್ಪದೇ ಮತದಾನ ಮಾಡಿಸುವಂತೆ ಮನವರಿಕೆ ಮಾಡಿಕೊಟ್ಟರು.
ನಂತರ ಗುಬ್ಬಿ ಪಟ್ಟಣದ ಬಿ.ಎಚ್. ರಸ್ತೆಯ ಬಂಗ್ಲೋಪಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 143, 144, 145 ಮತಗಟ್ಟೆಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಸೂಚನೆ ನೀಡಿ, ನೆರದಿದ್ದ ಮತದಾರರಲ್ಲಿ ಮುಕ್ತ ನ್ಯಾಯಸಮ್ಮತ ಮತದಾನಕ್ಕೆ ಸಹಕರಿಸುವಂತೆ ಕೋರಿದರು.ಈ ಸಂದರ್ಭ ಪಾಲಿಕೆ ಆಯುಕ್ತೆ ಹಾಗೂ ಸಹಾಯಕ ಚುನಾವಣಾಧಿಕಾರಿ ಅಶ್ವಿಜ, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.