ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ 5 ತಿಂಗಳ ಒಳಗಾಗಿ ಎನ್.ಎಂ.ನಾಗರಾಜ್ ವರ್ಗಾವಣೆಯಾಗಿದ್ದಾರೆ. ಇವರ ಜಾಗಕ್ಕೆ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ನೇಮಕಗೊಂಡಿದ್ದಾರೆ. ಜನವರಿ1ಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಎನ್.ಎಂ.ನಾಗರಾಜ್ ಅವರು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದ್ದರು. ಹೀಗಿದ್ದರೂ ನಾಗರಾಜ್ ಅವರು ವರ್ಗಾವಣೆಯಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮೀನಾ ನಾಗರಾಜ್ ಬಡ್ತಿ ಪಡೆದು ಕಂದಾಯ ಇಲಾಖೆ ಉಪಕಾರ್ಯದರ್ಶಿಯಾಗಿ ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ ಬೆಂಗಳೂರಿನ ಕೌಶಲ್ಯ ಅಭಿವೃದ್ಧಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎನ್.ಎಂ.ನಾಗರಾಜ್ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಆದರೆ ಎನ್.ಎಂ.ನಾಗರಾಜ್ ಕೇವಲ 4 ತಿಂಗಳು 18 ದಿನದಲ್ಲೇ ವರ್ಗಾವಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರೊಂದಿಗೆ ಜಿಲ್ಲಾಧಿಕಾರಿಯಾಗಿದ್ದ ಎನ್.ಎಂ.ನಾಗರಾಜ್ ಅವರನ್ನು ಏಡ್ಸ್ ನಿಯಂತ್ರಣ ಮಂಡಳಿಯ ಓಂಬುಡ್ಸ್‌ಮನ್ ಆಗಿ ವರ್ಗಾವಣೆ ಮಾಡಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ.ಜನಪರವಾಗಿ ಕಾರ್ಯನಿರ್ವಹಿಸುವ ಅಧಿಕಾರಿಯನ್ನು ಜನಪರವಾಗಿರುವ ಇಲಾಖೆಗೆ ವರ್ಗಾವಣೆ ಮಾಡಿದರೆ ಜನರಿಗೆ ಸಹಾಯವಾಗುತ್ತದೆ. ಆದರೆ ಜನರೇ ಹತ್ತಿರ ಸುಳಿಯದ ಇಲಾಖೆಗೆ ಜನಪರ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಕಾಫಿನಾಡಿನ ಜನರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.
ಮರು ಮತ ಎಣಿಕೆಯೇ ಕಾರಣವಾಯಿತೇ?
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಬೆನ್ನಲ್ಲೇ ಜಿಲ್ಲಾಧಿಕಾರಿ ವರ್ಗಾವಣೆಯಾಗಿರುವುದು ಜನರ ಕುತೂಹಲಕ್ಕೆ ಕಾರಣವಾಗಿದೆ. ನ್ಯಾಯಾಲಯದ ಆದೇಶದಂತೆ ಅಂಚೆ ಮತಗಳ ಮರುಎಣಿಕೆ ನಡೆಸಿದ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿವೆ.
ಜನಪರ ಆಡಳಿತ ನೀಡಿದ ನಾಗರಾಜ್ಎನ್.ಎಂ.ನಾಗರಾಜ್ ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಆಗಿರುವಷ್ಟು ದಿನವೂ ಜನರೊಂದಿಗೆ ನಿಕಟ ಸಂಪರ್ಕದಲ್ಲಿದ್ದಿದ್ದು ವಿಶೇಷವಾಗಿತ್ತು. ಎಷ್ಟೇ ಸಭೆಗಳಿದ್ದರೂ ಅದರ ಮಧ್ಯೆ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸುತ್ತಿದ್ದುದ್ದಲ್ಲದೆ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡುತ್ತಿದ್ದರು.
ಇದಲ್ಲದೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಸಂತ್ರಸ್ತರ ಪುನರ್ವಸತಿಗೆ ಜತೆಗೆ ಮಲೆನಾಡಿದ ವನ್ಯಜೀವಿ ಮಾನವ ಸಂಘರ್ಷ ನಿವಾರಣೆ ಬಗ್ಗೆಯೂ ವೈಜ್ಞಾನಿಕ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದರು. ಅದರ ಫಲವಾಗಿಯೇ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಕುಟುಂಬಗಳ ಸ್ಥಳಾಂತರಕ್ಕೆ ಮರುಜೀವ ಬಂದಿದೆ.