ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಹೊರಬೇಕು ಎಂದು ಭೂಮಿತಾಯಿ ಹೋರಾಟ ಸಮಿತಿ ಆಗ್ರಹಿಸಿ ಪ್ರತಿಭಟನೆ ನಡೆಸಿತು.ಪಟ್ಟಣದ ತಾಲೂಕು ಕಚೇರಿ ಎದುರು ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ ಹಾಗೂ ಹಿರಿಯ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ಸೇರಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದರು.
ರೈತ ಸಂಕಷ್ಟದಲ್ಲಿದ್ದ ಸಮಯದಲ್ಲಿ ಜಿಲ್ಲಾಧಿಕಾರಿಗಳ ಬಳಿ ಬಂದು ಸಮಸ್ಯೆಗಳ ಹೇಳಿಕೊಳ್ಳುತ್ತಾರೆ. ಆದರೆ, ಸಮಸ್ಯೆ ಹೇಳಿಕೊಳ್ಳಲು ಬಂದ ರೈತನಿಗೆ ಸಮಸ್ಯೆ ಆಲಿಸದ ಜಿಲ್ಲಾಧಿಕಾರಿಗಳ ಬೇಜವಾಬ್ದಾರಿಯೇ ರೈತನ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿದರು.ಕೇವಲ ಜಿಲ್ಲಾಧಿಕಾರಿಗಳ ಕಚೇರಿ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ಹಾಗೂ ಲಂಚಾವತಾರ ತಾಂಡವವಾಡುತ್ತಿದೆ. ಕೃಷಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಿಂದ ತಿಂಗಳ ಕಪ್ಪ ಪಡೆಯುತ್ತಿದ್ದು, ಸಮಸ್ಯೆ ಕಂಡರೂ ಕಾಣದಂತೆ ವರ್ತಿಸಿದ್ದಾರೆ. ಇವರೊಂದಿಗೆ ಜಿಲ್ಲೆಯ ಎಲ್ಲಾ ಶಾಸಕರು ಜೊತೆಯಾಗಿದ್ದಾರೆ ಎಂದು ಕಿರಿಕಾರಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ರೈತ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಮೃತ ರೈತನ ಕುಟುಂಬಸ್ಥರಿಗೆ ಕೇವಲ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ರೈತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವುದಾಗಿ ಎಲ್ಲೂ ಹೇಳಿಲ್ಲ. ಪ್ರತಿದಿನ ಕಚೇರಿಗಳಲ್ಲಿ ಲಂಚ ನೀಡದೆ ಯಾವುದೇ ಕೆಲಸವಾಗುತ್ತಿಲ್ಲ ಎಂದು ಆರೋಪಿಸಿದರು.ಘಟನೆ ನಂತರ ತಹಸೀಲ್ದಾರರು ಸೇರಿದಂತೆ ಇತರ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸದೆ ಇರುವುದು ನೊಂದ ಜನಸಾಮಾನ್ಯರಿಗೆ ಕಣ್ಣೀರ ಹೊರೆಸುವವರು ಯಾರು. ಸರ್ಕಾರವೇ ಬೇಲಿ ಎದ್ದು ಹೊಲ ಮೇಯ್ಯುವಂತೆ ಇಂತಹ ಪ್ರಕರಣ ಮುಚ್ಚಿ ಲಂಚದ ಹಾವಳಿಯ ಜೊತೆಯಲ್ಲಿದೆ. ಕೂಡಲೆ ನೊಂದ ರೈತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ ಮಾತನಾಡಿ, ರೈತ ಪರ ನಿಲ್ಲುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಇದೀಗ ಭ್ರಷ್ಟಾಚಾರದಲ್ಲಿ ಮುಳಿಗಿ ಹೋಗಿದೆ. ರೈತರು ಆತ್ಮಹತ್ಯೆ ದಾರಿ ಹಿಡಿಯುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಂತರ ತಹಸೀಲ್ದಾರ್ ಚೇತನಾಯಾದರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಹದೇವಪುರ ಕೃಷ್ಣ, ಉಂಡವಾಡಿ ಮಹದೇವು, ರಾಮಚಂದ್ರ, ರಾಮಕೃಷ್ಣ, ಶ್ರೀನಿವಾಸ್, ಮರಿಗೌಡ, ಚಂದ್ರಶೇಖರ್ ಸೇರಿದಂತೆ ಸಮಿತಿ ಕಾರ್ಯಕರ್ತರ ಹಾಜರಿದ್ದರು.
;Resize=(128,128))
;Resize=(128,128))
;Resize=(128,128))