ಎನ್‌ಆರ್‌ ಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ದರ್ಶನ ಕಾರ್ಯಕ್ರಮ

| Published : Oct 19 2023, 12:46 AM IST

ಎನ್‌ಆರ್‌ ಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ದರ್ಶನ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಆರ್‌ ಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ದರ್ಶನ ಕಾರ್ಯಕ್ರಮ
ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಬಾವಿ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾಹಿತಿ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಅ. 25 ಅಥವಾ 27 ರಂದು ನರಸಿಂಹರಾಜಪುರ ತಾಲೂಕು ಕೇಂದ್ರದಲ್ಲಿ ನಡೆಯಲಿದ್ದು ತಾಲೂಕು ಮಟ್ಟದ ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಸೂಚಿಸಿದರು. ಬುಧವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ತಿಂಗಳು ಒಂದೊಂದು ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ನಡೆಸಬೇಕು ಎಂದು ಸರ್ಕಾರ ತೀರ್ಮಾನಿಸಿದೆ. ಕಳೆದ ತಿಂಗಳು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ನಡೆದಿತ್ತು. ಜನತಾ ದರ್ಶನದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಮೂಲ ಭೂತ ಸಮಸ್ಯೆಗಳ ಬಗ್ಗೆ ಪರಿಹಾರ ಸಿಗಲಿದೆ. ನರಸಿಂಹರಾಜಪುರದಲ್ಲಿ ಈ ಬಾರಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಎಲ್ಲಾ ಸಿದ್ದತೆ ಮಾಡಿಕೊಳ್ಳಬೇಕಾಗಿದೆ ಎಂದರು. ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಜಿಲ್ಲೆಯ 5 ಶಾಸಕರು ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರು, ಲೋಕ ಸಭಾ ಸದಸ್ಯರನ್ನು ಆಹ್ವಾನಿಸಬೇಕಾಗಿದೆ. ಜಿಲ್ಲಾಧಿಕಾರಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರತಿ ತಾಲೂಕಿಗೂ ಪ್ರತ್ಯೇಕ ಕೌಂಟರ್‌ ನಿರ್ಮಾಣ ಮಾಡಿ ಅಲ್ಲಿ ಆಯಾ ತಾಲೂಕಿನವರು ಅರ್ಜಿ ನೀಡಬಹುದು ಎಂದರು. ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅರಣ್ಯ ಸಮಸ್ಯೆ, ಆನೆಗಳ ಕಾಟ, ಹಕ್ಕು ಪತ್ರದ ಸಮಸ್ಯೆಗಳ ಬಗ್ಗೆ ಜನರು ಅರ್ಜಿ ನೀಡಬಹುದು. ಬಯಲು ಸೀಮೆ ಪ್ರದೇಶದ ಸಮಸ್ಯೆ ಬೇರೆಯಾಗಿದ್ದು ಬರಗಾಲ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಾಗೂ ಇತರ ಮೂಲ ಭೂತ ಸಮಸ್ಯೆ ಬಗ್ಗೆ ಚರ್ಚೆ, ಪರಿಹಾರ ಸಿಗಲಿದೆ.ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಉತ್ತರ ನೀಡಲಿದ್ದಾರೆ ಎಂದರು. ಜಿಲ್ಲಾ ಜನತಾ ದರ್ಶನದ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಪ್ರತಿ ಗ್ರಾಪಂಗೂ ಮಾಹಿತಿ ನೀಡಿ ಪ್ರಚುರ ಪಡಿಸಬೇಕು. ಆಯಾ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ, ತಮ್ಮ ಗ್ರಾಮಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಬೇಕು ಎಂದು ಸೂಚಿಸಿದರು. ತಹಸೀಲ್ದಾರ್‌ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲು ಸಭೆ ತೀರ್ಮಾನಿಸಿತು. ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದ ಪ್ರತಿ ಯೊಬ್ಬರಿಗೂ ಊಟ ನೀಡಲು ಸಭೆ ತೀರ್ಮಾನಿಸಿತು. ಸಭೆಯಲ್ಲಿ ತಹಸೀಲ್ದಾರ್‌ ತನುಜ ಟಿ.ಸವದತ್ತಿ, ತಾಪಂ ಇ.ಒ. ನವೀನ್ ಕುಮಾರ್‌, ಕೊಪ್ಪ ಡಿ.ವೈ.ಎಸ್‌.ಪಿ.ಅನಿಲ್ ಕುಮಾರ್ ಇದ್ದರು. ಪೂರ್ವ ಭಾವಿ ಸಭೆಗೆ ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಗ್ರಾಪಂ ಸದಸ್ಯರು, ಕಾಂಗ್ರೆಸ್‌ ಹಾಗೂ ವಿವಿಧ ಪಕ್ಷದ ಮುಖಂಡರು ಭಾಗವಹಿಸಿ ಸಲಹೆ ನೀಡಿದರು.