ಸಾರಾಂಶ
ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದಲ್ಲಿ ಅ.26 ರಂದು ರಾಯಚೂರು ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾ ಶೈಕ್ಷಣಿಕ ಸಮಾವೇಶ-2024 ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ತಾಲ್ಲೂಕು ಘಟಕದ ಗೌರವಾಧ್ಯಕ್ಷ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ತಿಳಿಸಿದರು.ಮಸ್ಕಿ ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಜಿಲ್ಲಾ ಸಮಾವೇಶವನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಡಾ.ಶರಣಪ್ರಕಾಶ ಪಾಟೀಲ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ ಎಂದರು. ಅಧ್ಯಕ್ಷತೆಯನ್ನು ಸಿಂಧನೂರಿನಶಾಸಕ ಹಂಪನ ಗೌಡ ಬಾದರ್ಲಿ ವಹಿಸಲಿದ್ದು, ಸಂಸದರಾದ ರಾಜಶೇಖರ ಹಿಟ್ನಾಳ್, ಜಿ.ಕುಮಾರನಾಯಕ, ಖಾದಿ ಗ್ರಾಮೊದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರುವಿಹಾಳ ಸೇರಿದಂತೆ ಜಿಲ್ಲೆಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.ಇದೇ ವೇಳೆ ಜಿಲ್ಲೆಯ ವಿವಿಧ ತಾಲ್ಲೂಕುಗಳ 200 ಜನ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದವರು ತಿಳಿಸಿದರು.ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಎನ್. ಮಾತನಾಡಿ, ಸರ್ಕಾರ ಡಾ.ನಂಜುಂಡಪ್ಪ ವರದಿಯ ಆಧಾರದಲ್ಲಿ ಅನುದಾನ ನೀಡಿ ಶಿಕ್ಷಣ ಸಂಸ್ಥೆಗಳ ನೆರವಿಗೆ ಧಾವಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ಸ್ವಾಮಿ, ಕೆ.ವಿ.ರೆಡ್ಡಿ, ಲಿಂಗಪ್ಪ ಚವ್ಹಾಣ ಇತರರು ಇದ್ದರು.