ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜ್ಯ ಸರ್ಕಾರ ಜಿಲ್ಲೆಯ ರೈತರಿಗೆ ಮೋಸ ಮಾಡಿದೆ. ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ನಾಲೆಗಳಿಗೆ ನೀರು ಹರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ದೂರಿದರು.ತಾಲೂಕಿನ ಬೂಕನಕೆರೆ, ಬಲ್ಲೇನಹಳ್ಳಿ, ಗಂಜೀಗೆರೆ, ವಿಠಲಾಪುರ, ಬಳ್ಳೇಕೆರೆ ಮುಂತಾದ ಕಡೆ ಶಾಸಕ ಎಚ್.ಟಿ.ಮಂಜು ಸೇರಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಮೈತ್ರಿ ಅಭ್ಯರ್ಥಿ ಎಚ್ .ಡಿ.ಕುಮಾರಸ್ವಾಮಿ ಪರ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಹೇಮಾವತಿ ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ ರಾಜ್ಯ ಸರ್ಕಾರ ನೆರೆಯ ತುಮಕೂರು ಜಿಲ್ಲೆಗೆ ನೀರು ಹರಿಸಿ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿದೆ. ತಾಲೂಕಿನಲ್ಲಿ ಒಣಗುತ್ತಿರುವ ಬೆಳೆಗಳ ಸಂರಕ್ಷಣೆಗಾಗಿ ಅಗತ್ಯ ನೀರು ಹರಿಸುವಂತೆ ಒತ್ತಾಯಿಸಿದರು.ಕುಮಾರಣ್ಣ ಗೆದ್ದು ಲೋಕಸಭೆಗೆ ಹೋದರೆ ರಾಜ್ಯದ ಸಮಸ್ತ ಸಮಸ್ಯೆಗಳ ಪರಿಹಾರಕ್ಕೆ ಬಹುದೊಡ್ಡ ಶಕ್ತಿ ಬರುತ್ತದೆ. ಕುಮಾರಣ್ಣ ಕೇವಲ ಮಂಡ್ಯ ಜಿಲ್ಲೆಯನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಅವರು ರಾಜ್ಯದ ಜನರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೆ. ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ಅನುದಾನ ತರುತ್ತಾರೆ ಎಂದು ಹೇಳಿದರು.
ವಿಪಕ್ಷ ಶಾಸಕರೆಂದು ಎಚ್.ಟಿ.ಮಂಜು ಅವರಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ನಾನು ಕ್ಷೇತ್ರದ ಶಾಸಕರಾದ ಎಚ್.ಟಿ.ಮಂಜು ಅವರ ಜೊತೆ ಕೈಜೋಡಿಸಿ ಸ್ಥಗಿತಗೊಂಡಿರುವ ತಾಲೂಕಿನ ಎಲ್ಲಾ ಏತ ನೀರಾವರಿ ಯೋಜನೆಗಳಿಗೂ ಅಗತ್ಯ ಅನುದಾನ ಬಿಡುಗಡೆ ಮಾಡಿಸಿಯೇ ತೀರುತ್ತೇನೆ ಎಂದು ಶಪಥ ಮಾಡಿದರು.ನಾನು ಜೆಡಿಎಸ್ ಪಕ್ಷದಿಂದಲೇ ಶಾಸಕನಾದವನು. ಕ್ಷೇತ್ರದ ಅಭಿವೃದ್ಧಿ ಮತ್ತು ನಮ್ಮ ತಾಲೂಕಿನ ಮಣ್ಣಿನ ಮಗ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಬಿಜೆಪಿಗೆ ಹೋಗಬೇಕಾಯಿತು. ಎಚ್.ಟಿ.ಮಂಜು ಶಾಸಕರಾಗಿರುವುದಕ್ಕೆ ನನಗೆ ಬೇಸರವಿಲ್ಲ. ನನ್ನನ್ನು ಎರಡು ಅವಧಿಗೆ ಶಾಸಕನನ್ನಾಗಿ ಮಾಡಿದ ಕುಮಾರಣ್ಣನ ಋಣ ತೀರಿಸಬೇಕಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಜನ ಕುಮಾರಣ್ಣನನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುವಂತೆ ಕರೆ ನೀಡಿದರು. 60 ಸಾವಿರಕ್ಕೂ ಅಧಿಕ ಲೀಡ್ ಕೊಡಿ:
ಶಾಸಕ ಎಚ್.ಟಿ.ಮಂಜು ಮಾತನಾಡಿ, ಮೈತ್ರಿ ಅಭ್ಯರ್ಥಿ ಎಚ್ ಡಿಕೆ ಗೆಲುವು ನಿಶ್ಚಿತ. ಆದರೆ, ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದ ಜನ ಅತೀಹೆಚ್ಚು ಮತ ಅಂದರೆ ಕುಮಾರಣ್ಣನಿಗೆ ಕ್ಷೇತ್ರದಲ್ಲಿ 60 ಸಾವಿರಕ್ಕೂ ಅಧಿಕ ಲೀಡ್ ಬರುವಂತೆ ಮಾಡಬೇಕು ಎಂದರು.ವಿಪಕ್ಷಗಳು ಪ್ರಧಾನಿ ಮೋದಿ ಸೇರಿ ಬಿಜೆಪಿಗರು ಯಾವ ಸ್ವಾತ್ಯಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಶ್ನಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ಸಿಗರು ನಿಮ್ಮವರು ಯಾವ ಸ್ವಾತ್ಯಂತ್ರ ಹೋರಾಟದಲ್ಲಿ ಭಾಗವಹಿಸಿದ್ದರು ಎನ್ನುವುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದರು.
ಅಂಬೇಡ್ಕರ್ ರಚಿತ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ಸಂವಿಧಾನದ ಹೆಸರಿನಲ್ಲಿ ಕಾಂಗ್ರೆಸ್ ದೇಶದ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಟೀಕಿಸಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ತಾಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೇಗೌಡ, ಮುಖಂಡರಾದ ಬಲ್ಲೇನಹಳ್ಳಿ ನಂದೀಶ್, ವಾಟಾಳ್ ನಾಗರಾಜ್, ಧನಂಜಯ, ಲಾಯರ್ ನಾಗೇಶ್, ಪೂವನಹಳ್ಳಿ ರೇವಣ್ಣ, ರಾಜಶೇಖರ್ ಸೇರಿ ಹಲವು ಮುಖಂಡರು ಇದ್ದರು.