ಮಡಿಕೇರಿ: ರಾಜ್ಯದ 31 ಜಿಲ್ಲೆಗಳಲ್ಲಿ ಪ್ರಸ್ತುತ 15 ಜಿಲ್ಲೆಗಳಲ್ಲಿ ಮಾತ್ರ ಸರಕಾರಿ ಅನುದಾನಿತ ಉತ್ಸವಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತೀ ಜಿಲ್ಲೆಗಳಲ್ಲಿ ಉತ್ಸವಗಳು ಸರಕಾರದ ಅನುದಾನದ ಮೇರೆ ನಡೆಯುವಂತಾಗಲಿ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಪ್ರಸ್ತಾಪಿಸಿದರು.

ಬೆಂಗಳೂರಿನಲ್ಲಿರುವ ವಿಕಾಸಸೌಧದಲ್ಲಿ ಕರೆಯಲಾಗಿದ್ದ ರಾಜ್ಯದ ‘ಸಾಂಸ್ಕೃತಿಕ ನೀತಿ ಸಮಿತಿ’ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ತಮ್ಮ ಸಲಹೆಗಳನ್ನು ಪ್ರಸ್ತಾಪಿಸಿದ ಮಹೇಶ್ ನಾಚಯ್ಯ, ರಾಜ್ಯದ ಇತರೆ ಕೆಲವು ಜಿಲ್ಲೆಗಳಲ್ಲಿ ಆಚರಿಸಲ್ಪಡುತ್ತಿರುವ ಸರ್ಕಾರಿ ಅನುದಾನಿತ ಉತ್ಸವಗಳಂತೆ ಕೊಡಗಿನಲ್ಲಿ ಪುತ್ತರಿಯನ್ನು ಕನಿಷ್ಠ ಒಂದು ವಾರಗಳ ಕಾಲ ನಡೆಸುವಂತೆ ಹಾಗೂ ಪುತ್ತರಿಗೆ ಪ್ರಧಾನವಾಗಿರುವ ಮಂದ್‌ಗಳಿಗೆ ವಿಶೇಷ ಅನುದಾನ ಒದಗಿಸುವುದರ ಮೂಲಕ ಅವುಗಳ ರಕ್ಷಣೆಗೆ ಮುಂದಾಗಬೇಕಾಗಿ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್. ತಂಗಡಗಿ ಅಧ್ಯಕ್ಷತೆಯ ಸಭೆಯಲ್ಲಿ ಮಾತನಾಡಿದ ನಾಚಯ್ಯ ಸರ್ಕಾರವು ಅನುದಾನಿತ ಉತ್ಸವಗಳ ಕಾರ್ಯಕ್ರಮ ನಿಯೋಜನೆಯಲ್ಲಿ ಅಕಾಡೆಮಿ ಅಧ್ಯಕ್ಷರಿಗೆ ಅಧಿಕಾರ ನೀಡಬೇಕು. ಸಾಮರಸ್ಯ ಹಾಗೂ, ಸಹಬಾಳ್ವೆಯ ದಿಸೆಯಿಂದ ಸ್ಥಳೀಯ ಕಲಾವಿದರುಗಳಿಗೆ ಶೇ. 50 ರಷ್ಟು ಅವಕಾಶ ಕಲ್ಪಿಸಬೇಕೆಂಬ ಬೇಡಿಕೆಗೆ ಸಹಮತ ವ್ಯಕ್ತ ಪಡಿಸಿದರು. ಕೊಡವ ಸಂಸ್ಕೃತಿಯ ಮೂಲ ಸ್ಥಾನವಾಗಿರುವ ಮಂದ್, ಅಂಬಲಗಳನ್ನು ರಕ್ಷಿಸಿ, ಪೋಷಿಸುವಲ್ಲಿ, ಇಲ್ಲಿ ನಡೆಸುವ ಹಲವು ಪುತ್ತರಿ ಕೋಲಾಟ್, ಆಟ್-ಪಾಟ್‌ಗಳಂತ ಸಾಂಸ್ಕೃತಿಕ ಚಟುವಟಿಕೆಗಳನ್ನು ಆರ್ಥಿಕ ಸಾಂಸ್ಕೃತಿಕವಾಗಿ ಪ್ರೋತ್ಸಾಹಿಸಬೇಕು. ಕೆಲವೆಡೆಗಳಲ್ಲಿ ಮುಚ್ಚಿ ಹೋಗಿರುವ ಹಾಗೂ ಅತಿಕ್ರಮಣಗೊಂಡಿರುವ ಮಂದ್‌ಗಳನ್ನು ತೆರವುಗೊಳಿಸಲು ಸಹಕರಿಸಬೇಕು. ಪುತ್ತರಿ ಹಬ್ಬವು ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಚರಣೆಯಾಗಿದ್ದು, ಇದರಲ್ಲಿ ಜನಾಂಗ ಹಾಗೂ ನಾಡಿನ ಸಾಮರಸ್ಯ ಅಡಗಿದೆ. ಇಂತಹ ಸಾಂಸ್ಕೃತಿಕ ಹಿನ್ನಲೆಯುಳ್ಳ ಪುತ್ತರಿ ಹಬ್ಬದ ಗತ ವೈಭವವು ಮರುಕಳುಹಿಸುವಲ್ಲಿ ಸಹಕಾರದಿಂದ ಸಕಲ ರೀತಿಯ ಸಹಕಾರ ಹಾಗೂ ಅನುದಾನದ ಅಗತ್ಯವಿದೆ ಎಂದರು. ಕೊಡವ, ತುಳು, ಅರೆಭಾಷೆ ಒಳಗೊಂಡಿರುವ ಭಾಷಾ ಅಕಾಡೆಮಿಗಳು ಭೌಗೋಳಿಕ ಮತ್ತು ಸಾಮಾಜಿಕ ಪರಿಮಿತಿಗಳನ್ನು ಮೀರಿ ಸರ್ವರನ್ನು ತಲುಪುವ ನಿಟ್ಟಿನಲ್ಲಿ ಭಾಷಾಭಿವೃದ್ಧಿ ಕೈಗೊಳ್ಳಲು ಶ್ರಮಿಸುವುದು. ಅಕಾಡೆಮಿಗಳ ಕಾರ್ಯ ಯೋಜನೆಗಳನ್ನು ಆರ್ಥಿಕವಾಗಿ ಬಲಪಡಿಸಲು ಆಯಾಯ ಅಕಾಡೆಮಿಗಳ ಕಾರ್ಯವ್ಯಾಪ್ತಿ ಪರಿಗಣಿಸಿ ಅಗತ್ಯಾನುಸಾರವಾಗಿ ಅನುದಾನವನ್ನು ಇಲಾಖೆಯ ವತಿಯಿಂದ ಒದಗಿಸಿಕೊಳ್ಳುವುದು. ನಮ್ಮ ದೇಶದಲ್ಲಿ ಮಧ್ಯ ಪ್ರದೇಶದ ಅಮರ ಕಂಟಕದಲ್ಲಿ ಮಾತ್ರ ಒಂದು ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಇದೆ. ಇತರೆ ಯಾವುದೇ ರಾಜ್ಯದಲ್ಲಿ ಇಲ್ಲ. ಕರ್ನಾಟಕದ ವಿವಿಧ ಭಾಗಗಳಲ್ಲಿ ಬುಡಕಟ್ಟು ಜನಾಂಗಗಳು ಮತ್ತು ಸಂಸ್ಕೃತಿಗಳು ವಿಸ್ತಾರವಾಗಿದ್ದು, ಅವುಗಳ ಅಧ್ಯಯನ ಮತ್ತು ಸಂಶೋಧನೆಗೆ ಒಂದು ಪ್ರತ್ಯೇಕ ವಿಶ್ವ ವಿದ್ಯಾಲಯದ ಅಗತ್ಯವಿದೆ ಎಂದು ಮಹೇಶ್ ನಾಚಯ್ಯ ಅವರು ಸಭೆಯಲ್ಲಿ ವಿವರಿಸಿದರು.

ಅಕಾಡೆಮಿಗಳ, ಪ್ರಾಧಿಕಾರದ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಸರ್ಕಾರದ ಅಧೀನ ಕಾರ್ಯದರ್ಶಿಗಳು, ಇಲಾಖಾಧಿಕಾರಿಗಳು ಹಾಜರಿದ್ದು ಈ ಮಹತ್ವದ ಸಭೆಯನ್ನು ಪುನಃ ಕರೆದು ಮರು ಪರಿಶೀಲಿಸುವಂತೆ ತೀರ್ಮಾನಿಸಲಾಯಿತು.