ಸಾರಾಂಶ
ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್‌ಗೆ ಅಧಿಕೃತ ಭೇಟಿ ಕಾರ್ಯಕ್ರಮದ ಪ್ರಯುಕ್ತ, ಕರ್ಕಳ್ಳಿ ರಸ್ತೆಯ ರೋಟರಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ರಾಜ್ಯಪಾಲ ಆರ್. ಕೇಶವ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ರೋಟರಿ ಸಂಸ್ಥೆಯಿಂದ ಸ್ಥಳೀಯ ಜನರ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಯೋಜನೆಗಳನ್ನು ಹಮ್ಮಿಕೊಂಡಲ್ಲಿ ಮಾತ್ರ ಅವುಗಳ ಪ್ರಯೋಜನ ಜನರಿಗೆ ಸಿಗಲಿದೆ ಎಂದು ಜಿಲ್ಲಾ ರಾಜ್ಯಪಾಲ ಆರ್. ಕೇಶವ್ ಅಭಿಪ್ರಾಯಪಟ್ಟಿದ್ದಾರೆ.ಇಲ್ಲಿನ ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್‌ಗೆ ಅಧಿಕೃತ ಭೇಟಿ ಕಾರ್ಯಕ್ರಮದ ಪ್ರಯುಕ್ತ, ಕರ್ಕಳ್ಳಿ ರಸ್ತೆಯ ರೋಟರಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿನ ಸೇವಾ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ರೋಟರಿ ವರ್ಷಂಪ್ರತಿ ಹತ್ತು ಹಲವು ಸೇವೆಗಳನ್ನು ಮಾಡಿಕೊಂಡು ಬರುತ್ತಿದೆ. ಮತ್ತೊಬ್ಬರ ಮೇಲೆ ದೂರು ನೀಡದೆ, ಮೊದಲು ನಾವೇ ಮುಂದೆ ನಿಂತು ಕೆಲಸ ಮಾಡಿದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ. ಸಂಸ್ಥೆಯ ಮೂಲಕ ಕಾಲಕ್ಕೆ ತಕ್ಕ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ, ಅದನ್ನು ಯಶಸ್ವಿಗೊಳಿಸಲು ಎಲ್ಲರೂ ಮುಂದಾಗಬೇಕೆಂದರು.ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್ ಮಾತನಾಡಿ, ರೋಟರಿ ಸಂಸ್ಥೆಯಿಂದ ಸಮಾಜದಲ್ಲಿ ಮಾಡುತ್ತಿರುವ ಸಾಮಾಜಿಕ ಸೇವಾ ಕಾರ್ಯದ ಪ್ರಯೋಜನಗಳು ಒಂದಿಲ್ಲೊಂದು ರೀತಿಯಲ್ಲಿ ನಮಗೂ ಸಿಗುತ್ತಿವೆ. ದೀರ್ಘಾವಧಿಯವರೆಗೆ ಜನರ ಸೇವೆಗೆ ದೊರಕುವಂತಹ ಹಲವು ಯೋಜನೆಗಳನ್ನು ಮಾಡಬೇಕಿದೆ ಎಂದರು.
ರೋಟರಿ ಅಧ್ಯಕ್ಷ ವಸಂತ್ ನಂಗಾರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚೇತನ್ ಚಂದ್ರಾಜು, ವಲಯ ಸೇನಾನಿ ಉಲ್ಲಾಸ್ ಕೃಷ್ಣ, ಜೆ.ಕೆ. ಪೊನ್ನಪ್ಪ, ಕೆ.ಡಿ. ಬಿದ್ದಪ್ಪ ಇದ್ದರು.;Resize=(128,128))
;Resize=(128,128))