ಎಕ್ಸ್‌ಪರ್ಟ್‌ ವಿದ್ಯಾರ್ಥಿಗಳ ಜತೆ ಜಿಲ್ಲಾ ಉನ್ನತ ಶ್ರೇಣಿ ಅಧಿಕಾರಿಗಳ ಸಂವಾದ

| Published : Apr 09 2025, 12:46 AM IST

ಎಕ್ಸ್‌ಪರ್ಟ್‌ ವಿದ್ಯಾರ್ಥಿಗಳ ಜತೆ ಜಿಲ್ಲಾ ಉನ್ನತ ಶ್ರೇಣಿ ಅಧಿಕಾರಿಗಳ ಸಂವಾದ
Share this Article
  • FB
  • TW
  • Linkdin
  • Email

ಸಾರಾಂಶ

ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಉನ್ನತಾಧಿಕಾರಿಗಳೊಂದಿಗೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸರಿಯಾದ ದಿನಚರಿಯೊಂದಿಗೆ ಜೀವನವನ್ನು ಶಿಸ್ತಿನಿಂದ ಆನಂದಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಉನ್ನತಾಧಿಕಾರಿಗಳೊಂದಿಗೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೃತ್ತಿ ಜೀವನದಲ್ಲಿ ಬರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಲು ಏಕಾಗ್ರತೆ ಮತ್ತು ಸಂಕಲ್ಪ ಮುಖ್ಯ. ಕ್ಷಣಿಕ ಸುಖಗಳು ಜೀವನವನ್ನು ಹಾಳು ಮಾಡುತ್ತವೆ, ವ್ಯಸನ ಮತ್ತು ಗೊಂದಲಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಪಂ ಸಿಇಒ ಡಾ. ಆನಂದ್‌ ಮಾತನಾಡಿ, ವೃತ್ತಿಪರ ಶಿಕ್ಷಣವು ನಿರ್ದಿಷ್ಟ ಕ್ಷೇತ್ರವನ್ನು ಕೇಂದ್ರೀಕರಿಸಿದರೆ, ಆಡಳಿತಾತ್ಮಕ ಸೇವೆ ಎಲ್ಲ ರೀತಿಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದರಲ್ಲದೆ, ಜೀವನದಲ್ಲಿ ಅನಿಶ್ಚಿತತೆಯನ್ನು ತಪ್ಪಿಸಲು ಸ್ಥಿರವಾದ ದಿನನಿತ್ಯದ ಕೆಲಸವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್. ಮಾತನಾಡಿ, ಜೀವನವು ಅನೇಕ ಅಂಶಗಳ ಮಿಶ್ರಣವಾಗಿದೆ, ಅಲ್ಲಿ ಕಠಿಣ ಪರಿಶ್ರಮ ಮತ್ತು ಶಿಸ್ತು ನಿರ್ಣಾಯಕ. ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲು ಸರಿಯಾದ ಮಾರ್ಗವನ್ನು ಆರಿಸಿಕೊಳ್ಳಬೇಕು ಎಂದರು.

ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.

ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್, ಆರ್ಕಿಟೆಕ್ಟ್ ದೀಪಿಕಾ ಎ. ನಾಯಕ್, ಪ್ರಾಂಶುಪಾಲ ಡಾ.ಎನ್.ಕೆ.ವಿ. ವಿಜಯನ್ ಕರಿಪ್ಪಲ್, ಉಪಪ್ರಾಂಶುಪಾಲ (ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ ಇದ್ದರು. ಉಪಪ್ರಾಂಶುಪಾಲೆ (ಆಡಳಿತ) ಧೃತಿ ವಿ. ಹೆಗ್ಡೆ ಸ್ವಾಗತಿಸಿ, ನಿರೂಪಿಸಿದರು.