ಪ್ರಯೋಗಾಲಯಗಳ ಪೂರ್ಣ ಸಾಮರ್ಥ್ಯ ಬಳಸಿಕೊಂಡು ನಿಗದಿತ ಗುರಿ ಶೀಘ್ರ ತಲುಪುವಂತೆ ಹಾಗೂ ರೈತರಿಗೆ ಸಕಾಲದಲ್ಲಿ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ

ಬಳ್ಳಾರಿ: ಮಳೆ ಕೊರತೆಯಿಂದ ಹಾನಿಗೊಳಗಾದ ಬಳ್ಳಾರಿ ತಾಲೂಕಿನ ಹಲಕುಂದಿ ಹಾಗೂ ಬಿ.ಬೆಳಗಲ್ ಗ್ರಾಮಗಳ ಕೃಷಿ ಜಮೀನುಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ತ್ರಿಲೋಕಚಂದ್ರ ಕೆ.ವಿ ಅವರು, ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು.

ತೊಗರಿ ಹಾಗೂ ಮೆಣಸಿನಕಾಯಿ ಬೆಳೆ ವೀಕ್ಷಿಸಿದ ಅವರು, ನೀರಿನ ಕೊರತೆಯಿಂದ ಬೆಳೆ ಬೆಳವಣಿಗೆ ಕುಂಠಿತಗೊಂಡಿರುವುದನ್ನು ಹಾಗೂ ಇಳುವರಿ ಗಣನೀಯವಾಗಿ ಕುಸಿಯುವ ಸಾಧ್ಯತೆ ಗಮನಿಸಿದರು. ಒಣಭೂಮಿ ಪ್ರದೇಶದಲ್ಲಿ ಮಳೆಯಾಗದೆ ತೊಗರಿ ಬೆಳವಣಿಗೆ ನಿಂತಿದ್ದು, ಹೂವು ಹಾಗೂ ಕಾಯಿ ಕಟ್ಟುವ ಹಂತದಲ್ಲೇ ಗಿಡಗಳು ಬಾಡುತ್ತಿರುವುದನ್ನು ಪರಿಶೀಲಿಸಿದರು.

ಮಣ್ಣು ಪರೀಕ್ಷೆ ವರದಿ ವಿಳಂಬಕ್ಕೆ ಅಸಮಾಧಾನ: ರೈತರಿಂದ ಸಂಗ್ರಹಿಸಿದ ಮಣ್ಣಿನ ಮಾದರಿಗಳ ಪರೀಕ್ಷೆ ಮತ್ತು ಕಾರ್ಡ್ ವಿತರಣೆ ತಿಂಗಳುಗಟ್ಟಲೆ ತಡವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮಣ್ಣು ಪರೀಕ್ಷಾ ವರದಿಯನ್ನು ಲ್ಯಾಮಿನೇಷನ್ ಮಾಡಿ ಕಾರ್ಡ್ ಕೊಡುವುದಕ್ಕಿಂತ ಫಲಿತಾಂಶ ಬಂದ ತಕ್ಷಣವೇ ರೈತರ ಮೊಬೈಲ್‌ಗೆ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಸಂದೇಶ ರವಾನಿಸಬೇಕು ಎಂದು ತಾಕೀತು ಮಾಡಿದರು.

ಬಿತ್ತನೆಗೆ ಮುಂಚೆಯೇ ಮಾಹಿತಿ ತಲುಪದಿದ್ದರೆ ಪರೀಕ್ಷೆ ನಡೆಸಿ ಪ್ರಯೋಜನವೇನು ಎಂದು ಪ್ರಶ್ನಿಸಿದರು. ಪ್ರಯೋಗಾಲಯಗಳ ಪೂರ್ಣ ಸಾಮರ್ಥ್ಯ ಬಳಸಿಕೊಂಡು ನಿಗದಿತ ಗುರಿ ಶೀಘ್ರ ತಲುಪುವಂತೆ ಹಾಗೂ ರೈತರಿಗೆ ಸಕಾಲದಲ್ಲಿ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ರೈತರ ಜಮೀನಿನಲ್ಲೇ ನಿಂತು ಆಪ್ ಮೂಲಕ ಪರಿಶೀಲನೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕಚಂದ್ರ ಕೆ.ವಿ, ರೈತರ ಜಮೀನಿನಲ್ಲಿ ನಿಂತು, ಬೆಳೆ ಸಮೀಕ್ಷೆ ಆಪ್ ಮೂಲಕ ವಿವರ ದಾಖಲಿಸುವ ವಿಧಾನ, ಜಿಪಿಎಸ್ ಆಧಾರಿತ ಫೋಟೋ ಅಪ್‌ಲೋಡ್ ಹಾಗೂ ಸರ್ವೆ ನಂಬರ್ ಪರಿಶೀಲನಾ ಪ್ರಕ್ರಿಯೆ ನೇರವಾಗಿ ವೀಕ್ಷಿಸಿದರು.

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು, ಕೃಷಿ ಅಧಿಕಾರಿಗಳ ಬಳಿ ಸ್ಥಳೀಯ ವಿಸ್ತೀರ್ಣ ಹಾಗೂ ರೈತರ ವಿವರಗಳ ಕುರಿತು ಮಾಹಿತಿ ಪಡೆದರು. ಪರಿಶೀಲನೆ ವೇಳೆ ತೊಗರಿ (ರೆಡ್ ಗ್ರಾಮ್) ಪ್ರಮುಖ ಬೆಳೆಯಾಗಿದ್ದು, ಅದರೊಂದಿಗೆ ಸಜ್ಜೆ ಅಂತರ ಬೆಳೆಯಾಗಿರುವುದು ಕಂಡುಬಂದಿತು.

ಸರ್ವೇ ನಂಬರ್ ಹಾಗೂ ಹಿಸ್ಸಾ ನಂಬರ್‌ಗಳ ನಿಖರ ಸ್ಥಳದಲ್ಲೇ (ಜಿಯೋ-ಫೆನ್ಸಿಂಗ್ ವ್ಯಾಪ್ತಿಯಲ್ಲಿ) ನಿಂತು ಫೋಟೋ ತೆಗೆಯುವುದು ಕಡ್ಡಾಯವಾಗಿದೆ. ಸರ್ವೇ ಮಾಡುವವರ ಮುಖ ಗುರುತಿಸುವಿಕೆ ಮೂಲಕವೇ ಲಾಗಿನ್ ಆಗುವ ವ್ಯವಸ್ಥೆ ಇರುವುದರಿಂದ ಯಾವುದೇ ರೀತಿಯ ನಕಲಿ ದಾಖಲಾತಿಗೆ ಅವಕಾಶವಿಲ್ಲ ಎಂದು ಕೃಷಿ ಅಧಿಕಾರಿಗಳು ವಿವರಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳೀಯ ರೈತರೊಂದಿಗೆ ಚರ್ಚಿಸಿ, ಸಮೀಕ್ಷೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ನಿಖರವಾಗಿ ಬೆಳೆ ಮಾಹಿತಿ ನಮೂದಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿಬ್ಬಂದಿಗೆ ಸೂಚನೆ ನೀಡಿದರು.

ಸಾಮಾನ್ಯವಾಗಿ ಎಕರೆಗೆ 20 ರಿಂದ 25 ಕ್ವಿಂಟಲ್‌ವರೆಗೆ ಬರಬೇಕಾಗಿದ್ದ ಇಳುವರಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಕೇವಲ 2 ರಿಂದ 5 ಕ್ವಿಂಟಲ್ ಕೂಡ ಬರುವುದು ಕಷ್ಟಕರವಾಗಿದೆ. ಗಿಡಗಳಲ್ಲಿ ಕಾಯಿ ಕಟ್ಟುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಅಕಾಲಿಕವಾಗಿ ಕಾಯಿ ಒಣಗುತ್ತಿವೆ. ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ನಿರ್ವಹಣೆಗಾಗಿ ರೈತರು ಲಕ್ಷಾಂತರ ಖರ್ಚು ಮಾಡಿದ್ದೇವೆ. ಆದರೆ ಇಳುವರಿ ತೀವ್ರವಾಗಿ ಕುಸಿದಿರುವುದರಿಂದ ಹಾಕಿದ ಬಂಡವಾಳವೂ ಮರಳಿ ಬಾರದಂತಾಗಿ ಕಂಗಾಲಾಗಿದ್ದೇವೆ. ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ನಮಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ವಿಮಾ ಮೊತ್ತ ಶೀಘ್ರವಾಗಿ ತಲುಪುವಂತೆ ಕ್ರಮಕೈಗೊಳ್ಳಬೇಕೆಂದು ರೈತರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಮಳೆಯಾಶ್ರಿತ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಥವಾ ವಿಮಾ ಸೌಲಭ್ಯ ತಲುಪುತ್ತಿರುವ ಕುರಿತು ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ನಿಯಮಾವಳಿಗಳ ಚೌಕಟ್ಟಿನಲ್ಲಿ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ.,ಜಂಟಿ ಕೃಷಿ ನಿರ್ದೇಶಕ ಕೆ.ಸೋಮಸುಂದರ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ, ತಹಸೀಲ್ದಾರ್ ಟಿ.ರೇಖಾ ಮತ್ತಿತರರಿದ್ದರು.