ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ಜನರು ಹಬ್ಬಕ್ಕಾಗಿ ವಿವಿಧ ಸಾಮಗ್ರಿಗಳ ಖರೀದಿಗೆ ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದರು. ನಗರದ ಗಾಂಧಿಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಲಕ್ಷ್ಮಿ ಟಾಕೀಸ್, ಪೊಲೀಸ್ ಚೌಕಿ, ಗೋಪಾಳ, ಬಿ.ಎಚ್ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳು ಗ್ರಾಹಕರಿಂದ ಗಿಜಿಗುಡುತ್ತಿತ್ತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ಜನರು ಹಬ್ಬಕ್ಕಾಗಿ ವಿವಿಧ ಸಾಮಗ್ರಿಗಳ ಖರೀದಿಗೆ ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದರು. ನಗರದ ಗಾಂಧಿಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಲಕ್ಷ್ಮಿ ಟಾಕೀಸ್, ಪೊಲೀಸ್ ಚೌಕಿ, ಗೋಪಾಳ, ಬಿ.ಎಚ್ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳು ಗ್ರಾಹಕರಿಂದ ಗಿಜಿಗುಡುತ್ತಿತ್ತು.ಹೊಸ ಬಟ್ಟೆ ಖರೀದಿ, ದಿನಸಿ ಖರೀದಿಗೆ ಜನ ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂದಿತು. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬವನ್ನು ಸ್ವಾಗತಿಸಲು ಜನತೆ ಸಿದ್ಧರಾಗಿದ್ದು, ಹೂವು ಹಣ್ಣಿನ ವ್ಯಾಪಾರ ಭರಾಟೆ ಕಂಡುಬಂತು. ಅವರೆಕಾಯಿ, ಕಬ್ಬು, ಗೆಣಸು, ಕಡಲೆಕಾಯಿ, ಹೂವು, ಹಣ್ಣುಗಳ ರಾಶಿ ರಾಶಿ ಬಂದಿತು. ಕಬ್ಬು, ಅವರೆ ಕೊಳ್ಳುವವರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು. ಬೆಲೆ ಏರಿಕೆ ನಡುವೆ ಸಹ ಗ್ರಾಹಕರು ಖರೀದಿ ನಡೆಸಿದ್ದು, ಸಂಕ್ರಾಂತಿಗಾಗಿ ಹಿಂದಿನ ದಿನವೇ ರಾಶಿ ರಾಶಿ ಕಬ್ಬು ಬಂದಿದೆ. ಕಬ್ಬು ಪ್ರತಿ ಜಿಲ್ಲೆಗೆ 30 ರಿಂದ 50 ರು. ವರೆಗಿದ್ದರೆ, ಗೆಣಸು ಕೆ.ಜಿ.ಗೆ 4 ರು., ಅವರೆಕಾಯಿ ಕೆ.ಜಿ.ಗೆ 70 ರು. ನಂತೆ ಮಾರಾಟ ನಡೆಯಿತು. ಎಳ್ಳು-ಬೆಲ್ಲ ಹಾಗೂ ಸಕ್ಕರೆ ಅಚ್ಚು ಕೆ.ಜಿ.ಗೆ 250 ರಿಂದ 300 ರು. ರವರೆಗೆ ಮಾರಾಟವಾಗುತ್ತಿತ್ತು. ಈ ಬಾರಿ ವಿಶೇಷವೆಂದರೆ ಹಲವು ಮಹಿಳಾ ಸಂಘ-ಸಂಸ್ಥೆಗಳು ತಾವೇ ಎಳ್ಳುಬೆಲ್ಲವನ್ನು ತಯಾರಿಸಿದ್ದು ಮಾರುಕಟ್ಟೆಯಲ್ಲಿ ಕೂಡ ಮಿಕ್ಸ್ ಎಳ್ಳು ಸಕ್ಕರೆ ಅಚ್ಚಿನ ವಿವಿಧ ಕಲಾಕೃತಿಗಳು, ಸಂಕ್ರಾಂತಿ ಕಾಳು ಮಾರಾಟ ಜೋರಾಗಿತ್ತು.
ಹೂವು ದುಬಾರಿ: ಎಲ್ಲ ಬಗೆಯ ಹೂವಿನ ಬೆಲೆಗಳೂ ಗಗನಕ್ಕೇರಿವೆ. ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಸೇವಂತಿಗೆ ಮಾರಿಗೆ 80 ರು., ಕಾಕಡ ಮಾರಿಗೆ 80ರಿಂದ 100 ರು. ಇತ್ತು. ಹಣ್ಣಿನ ದರ ಸಹ ಹೆಚ್ಚಾಗಿದ್ದು, ಪುಟ್ಟಬಾಳೆ ಕೆ.ಜಿ.ಗೆ 80 ರು. ಹಾಗೂ ಪಚ್ಚಬಾಳೆ ಕೆ.ಜಿ.ಗೆ 40 ರುನಂತೆ ಮಾರಾಟವಾದವು. ಕಿತ್ತಳೆಹಣ್ಣು ಕೆ.ಜಿ.ಗೆ 100 ರು.ಇದ್ದರೆ, ದಾಳಿಂಬೆ 200 ರು. ಬೆಲೆ ಇದೆ. ಸೇಬು 1 ಕೆ.ಜಿ.ಗೆ 150-200 ರುಪಾಯಿ, ದ್ರಾಕ್ಷಿ 150 ರು., ಸಪೋಟ 80 ರು., ಬೆಲೆ ಇದ್ದು ವ್ಯಾಪಾರಿಗಳು ಗ್ರಾಹಕರನ್ನು ಎದುರು ನೋಡುವ ಸ್ಥಿತಿ ಇತ್ತು. ಆದರೆ ತರಕಾರಿ ಬೆಲೆ ಅಷ್ಟಾಗಿ ಏರಿಕೆಯಾಗಿಲ್ಲ.