ರೈತರಿಗೆ ಗುಣಮಟ್ಟದ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಪೂರೈಸಿ

| Published : Mar 19 2025, 12:31 AM IST

ರೈತರಿಗೆ ಗುಣಮಟ್ಟದ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಪೂರೈಸಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ತಜ್ಞರನ್ನು ಸಂಪರ್ಕಿಸಿ ಅವರು ಹೇಳಿದ ಔಷಧಗಳನ್ನು ಖರೀದಿಸಲು ಅಂಗಡಿಗೆ ಬರುತ್ತಾರೆ. ಆಗ ಮಾರಾಟಗಾರರು ರೈತರು ಕೇಳಿದ ಔಷಧಿಯನ್ನು ಮಾತ್ರ ನೀಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ರೈತರಿಗೆ ಗುಣಮಟ್ಟದ ರಸಗೊಬ್ಬರ, ಕ್ರಿಮಿನಾಶಕ ಮತ್ತು ಬಿತ್ತನೆ ಬೀಜಗಳನ್ನು ಮಾರಾಟಗಾರರು ಪೂರೈಸಬೇಕು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಎಚ್‌. ರವಿ ತಿಳಿಸಿದರು.

ಜಯನಗರದ ಇಸ್ಕಾನ್ ನಲ್ಲಿರುವ ಶ್ರೀಧಾಮ ಹಾಲ್ ನಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟಗಾರರ ಸಂಘವು ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ರೈತರು ತಜ್ಞರನ್ನು ಸಂಪರ್ಕಿಸಿ ಅವರು ಹೇಳಿದ ಔಷಧಗಳನ್ನು ಖರೀದಿಸಲು ಅಂಗಡಿಗೆ ಬರುತ್ತಾರೆ. ಆಗ ಮಾರಾಟಗಾರರು ರೈತರು ಕೇಳಿದ ಔಷಧಿಯನ್ನು ಮಾತ್ರ ನೀಡಬೇಕು. ಅವರನ್ನು ದಾರಿ ತಪ್ಪಿಸಿ ಬೇರೆ ರೀತಿಯ ಔಷಧಗಳನ್ನು ನೀಡಬಾರದು ಎಂದು ಅವರು ಹೇಳಿದರು.

ಯಾವುದೇ ವಸ್ತುಗಳನ್ನು ಮಾರಾಟ ಮಾಡಿದಾಗ ಅದಕ್ಕೆ ಸಂಬಂಧಿಸಿದ ಬಿಲ್ ನೀಡಬೇಕು. ಪ್ರತಿ ಅಂಗಡಿ ಮುಂಭಾಗದಲ್ಲಿ ಪ್ರತಿ ಉತ್ಪನ್ನದ ದರ ಪಟ್ಟಿ ಪ್ರದರ್ಶಿಸಬೇಕು. ಎಂ.ಆರ್‌.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ಕಾಲಕಾಲಕ್ಕೆ ವ್ಯಾಪಾರ ಪರವಾನಗಿಯನ್ನು ನವೀಕರಿಸಬೇಕು ಎಂದರು.

ಇದೇ ವೇಳೆ ಖೋ- ಖೋ ಮಹಿಳಾ ವಿಶ್ವಕಪ್‌ ಗೆದ್ದ ಭಾರತ ತಂಡದ ಸದಸ್ಯೆ ಕುರುಬೂರಿನ ಬಿ. ಚೈತ್ರಾ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ನಂತರ ಮಾರಾಟಗಾರರ ಸಮಸ್ಯೆ ಕುರಿತು ಸಂಘದಿಂದ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಚಾಮರಾಜನಗರ ಜಂಟಿ ಕೃಷಿ ನಿರ್ದೇಶಕ ಡಾ.ಎಸ್.ಎನ್. ಆಬೀದ್, ಮೈಸೂರು ವಿಭಾಗ ಜಾಗೃತ ಕೋಶ ಜಂಟಿ ಕೃಷಿ ನಿರ್ದೇಶಕ ಡಾ.ಕೆ. ಮಧುಸೂಧನ್, ತೋಟಗಾರಿಕೆ ಜಂಟಿ ನಿರ್ದೇಶಕ ಎಚ್.ಎಂ. ನಾಗರಾಜ್, ಸಂಘದ ಅಧ್ಯಕ್ಷ ಬಿ.ಪಿ. ಶಿವಪ್ರಕಾಶ್, ಕಾರ್ಯದರ್ಶಿ ಕೆ.ಸಿ. ಸತೀಶ್ ಹಾಗೂ ಪದಾಧಿಕಾರಿಗಳು ಇದ್ದರು.