ಆಶಾ ಕಾರ್ಯಕರ್ತೆಯರಿಗೆ ಶಾಸನಬದ್ಧವಾಗಿ ಸೌಲಭ್ಯ ಒದಗಿಸಿ

| Published : Aug 14 2024, 01:01 AM IST

ಆಶಾ ಕಾರ್ಯಕರ್ತೆಯರಿಗೆ ಶಾಸನಬದ್ಧವಾಗಿ ಸೌಲಭ್ಯ ಒದಗಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಆಶಾ ಕಾರ್ಯಕರ್ತೆಯರು ಸಮಾಜದಲ್ಲಿ ರೋಗ ಹರಡದಂತೆ ಕಟ್ಟೆಚ್ಚರವಹಿಸಿ ಕೆಲಸ ಮಾಡುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಶಾಸನಬದ್ಧ ಸೌಲಭ್ಯ ಒದಗಿಸಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಸವಿತಾ ಪ. ಮಲ್ಲೇಶ್ ಸರ್ಕಾರವನ್ನು ಆಗ್ರಹಿಸಿದರು.

ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ ಸಂಯೋಜಿತ) ಮಂಗಳವಾರ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಸಮಾಜದಲ್ಲಿ ರೋಗ ಹರಡದಂತೆ ಕಟ್ಟೆಚ್ಚರವಹಿಸಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಇದುವರೆಗೂ ಶಾಸನಬದ್ಧ ಸೌಲಭ್ಯ ಸಿಗುತ್ತಿಲ್ಲ ಎಂದರೆ, ಸರ್ಕಾರ ಇದುವರೆಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಯನ್ನು ಈಡೇರಿಸಲು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅವರು ಕಿಡಿಕಾರಿದರು.

ಆಶಾಗಳಿಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ, ಅವರ ಕೆಲಸಕ್ಕೆ ಅಗೌರವ ಉಂಟಾಗುತ್ತಿದೆ. ಶಾಸನವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆಶಾಗಳ ಕಾರ್ಯಕ್ಕೆ ನ್ಯಾಯ ಒದಗಿಸಲು ಮೊದಲು ಶಾಸನ ಆಗಬೇಕು ಎಂದು ಅವರು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರು ಮಾಡುವ ಕೆಲಸಕ್ಕೆ ಪ್ರಸ್ತುತ ರಾಜ್ಯ ಸರ್ಕಾರ ಗೌರವಧನ ನೀಡುತ್ತಿದೆ. ಅಲ್ಲದೆ, ಆರೋಗ್ಯ ಇಲಾಖೆಯ ಪೋರ್ಟಲ್‌ ನಲ್ಲಿ ಕರ್ತವ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನಮೂದಿಸುವಾಗ ಕೆಲ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದ್ದು, ಮಾಹಿತಿ ನಮೂದಿಸಿದರೂ ಸಿಗಬೇಕಾದ ಸಂಭಾವನೆ ಸಿಗುತ್ತಿಲ್ಲ. ಇದು ಸರ್ಕಾರಕ್ಕೆ ತಿಳಿದಿದೆ. ಆದರೆ, ಆಗಬೇಕಾದ ಕೆಲಸವನ್ನು ಆಶಾಗಳು ಮಾಡುತ್ತಿರುವುದರಿಂದ ಸರ್ಕಾರಗಳು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಗೌರವ ಹಾಗೂ ಸೂಕ್ತ ಸಂಭಾವನೆ ಕೊಡಬೇಕು. ಆಗುತ್ತಿರುವ ಶೋಷಣೆ ನಿಲ್ಲಿಸಬೇಕು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಕಡಿಮೆ ಗೌರವಧನ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಗೌರವಾಧ್ಯಕ್ಷೆ ಪಿ.ಎಸ್. ಸಂಧ್ಯಾ ಮಾತನಾಡಿ, ಆಸ್ಪತ್ರೆಗಳಲ್ಲಿ ಬಿಳಿ ಹಾಗೂ ನೀಲಿ ಬಣ್ಣದ ಬಟ್ಟೆ ತೊಟ್ಟು ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತೆಯರಿಗೆ ತಿಂಗಳಿಗೆ 40 ಸಾವಿರಕ್ಕಿಂತ ಹೆಚ್ಚು ವೇತನ ನೀಡಲಾಗುತ್ತಿದೆ. ಆದರೆ, ಅವರಷ್ಟೇ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಆದರೆ, ಕಡಿಮೆ ಮೊತ್ತದ ಗೌರವ ಧನ ನೀಡುವ ಮೂಲಕ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದರು.

ಇನ್ನಿತರ ಆರೋಗ್ಯ ಕಾರ್ಯಕರ್ತರಂತೆ ಆಶಾ ಕಾರ್ಯಕರ್ತೆಯರಿಗೂ ವೇತನ ಸಿಗಬೇಕು. ಸರ್ಕಾರಗಳು ಆಶಾ ಕಾರ್ಯಕರ್ತೆಯರ ಹಿತ ಕಾಯಲು ಮುಂದಾಗಬೇಕು. ಆಶಾಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಶಾಸನಬದ್ದ ಸೌಲಭ್ಯಗಳನ್ನು ಒದಗಿಸಬೇಕು. ಸಾಮಾಜಿಕ ಭದ್ರತೆ ಖಾತ್ರಿ ಪಡಿಸಬೇಕು. ಸಾರ್ವಜನಿಕ ಆರೋಗ್ಯ ಬಲಪಡಿಸಲು ಅಗತ್ಯವಿರುವಷ್ಟು ಬಜೆಟ್ ಒದಗಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಆಶಾಗಳಿಗೆ ಮಾಸಿಕ 15 ಸಾವಿರ ರೂ ಪ್ರೋತ್ಸಾಹ ಧನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಸಮ್ಮೇಳನ ಅಂಗವಾಗಿ ರಾಮಸ್ವಾಮಿ ವೃತ್ತದಿಂದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದವರೆಗೆ ಆಯೋಜಿಸಿದ್ದ ಮೆರವಣಿಗೆಯಲ್ಲಿ ನೂರಾರು ಮಂದಿ ಆಶಾಗಳು ಪಾಲ್ಗೊಂಡಿದ್ದರು.

ಎಐಯುಟಿಯುಸಿ ಜಿಲ್ಲಾಧ್ಯಕ್ಷ ವಿ. ಯಶೋಧರ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ಮೈಸೂರು ನಗರ ಆಶಾ ಸಂಘದ ಸಲಹೆಗಾರರಾದ ಜಿ.ಎಸ್. ಸೀಮಾ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಶುಭಾ ಮಂಗಳ, ಉಪಾಧ್ಯಕ್ಷೆ ಭಾಗ್ಯ, ಪದಾಧಿಕಾರಿಗಳಾದ ಮಂಗಳಮ್ಮ, ಚಂದ್ರಮ್ಮ, ರೇಣುಕಾ, ಶಶಿಕಾಲ, ಮಣಿಲಾ, ಪವಿತ್ರಾ, ಭಾಗ್ಯ, ಸುಧಾ, ಕೋಮಲಾ, ಸುನೀತಾ, ಮಂಜುಳಾ ಮೊದಲಾದವರು ಇದ್ದರು.

----

ಕೋಟ್...

ಸಮಾಜ ಸೇವೆ ಹೆಸರಲ್ಲಿ ಎಲ್ಲಾ ಹಕ್ಕುಗಳಿಂದ ಆಶಾ ಕಾರ್ಯಕರ್ತೆಯರನ್ನು ವಂಚಿಸಲಾಗುತ್ತಿದೆ. ಆರೋಗ್ಯ ಕ್ಷೇತ್ರವನ್ನೂ ಸಂಪೂರ್ಣ ಖಾಸಗೀಕರಣಗೊಳಿಸುವ ಉದ್ದೇಶವೇ ಸರ್ಕಾರಗಳಿಗಿದೆ. ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳನ್ನು ತೆರೆಯಲು ಅನುಮತಿ ನೀಡಿ, ಸರ್ಕಾರಿ ಆಸ್ಪತ್ರೆಗಳಿಗೆ ಅತ್ಯುನ್ನತ ಮಟ್ಟದ ಸೇವಾ ಸೌಲಭ್ಯಗಳು ಸಿಗದಂತೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಕಾಯಂ ಉದ್ಯೋಗ ನೀಡಿದರೆ ಆರೋಗ್ಯ ಇಲಾಖೆಯ ಬಲಪಡಿಸಿದಂತಾಗುತ್ತದೆ.

- ಚಂದ್ರಶೇಖರ್ ಮೇಟಿ, ಜಿಲ್ಲಾ ಕಾರ್ಯದರ್ಶಿ, ಎಐಯುಟಿಯುಸಿ