ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೂತನವಾಗಿ ಸಿದ್ದಪಡಿಸಿದ ಕರ್ನಾಟಕ ವಿದ್ಯುಚ್ಛಕ್ತಿ ಸರಬರಾಜು ನಿಯಮಾವಳಿಗಳು (ಇ.ಎಸ್.ಆರ್)-2026 ಕರಡು ಪ್ರತಿ ಕುರಿತಂತೆ ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗೆ ಸಂಬಂಧಪಟ್ಟಂತೆ ಜಿಲ್ಲಾಮಟ್ಟದ ಸಾರ್ವಜನಿಕ ವಿಚಾರಣಾ ಸಭೆ ನಡೆಸಿ ವಿವಿಧ ಭಾಗೀದಾರರ ಅಭಿಪ್ರಾಯ ಆಲಿಸಿತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೂತನವಾಗಿ ಸಿದ್ದಪಡಿಸಿದ ಕರ್ನಾಟಕ ವಿದ್ಯುಚ್ಛಕ್ತಿ ಸರಬರಾಜು ನಿಯಮಾವಳಿಗಳು (ಇ.ಎಸ್.ಆರ್)-2026 ಕರಡು ಪ್ರತಿ ಕುರಿತಂತೆ ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗೆ ಸಂಬಂಧಪಟ್ಟಂತೆ ಜಿಲ್ಲಾಮಟ್ಟದ ಸಾರ್ವಜನಿಕ ವಿಚಾರಣಾ ಸಭೆ ನಡೆಸಿ ವಿವಿಧ ಭಾಗೀದಾರರ ಅಭಿಪ್ರಾಯ ಆಲಿಸಿತು.ಕೆಇಆರ್ಸಿ ಅಧ್ಯಕ್ಷ ಪಿ.ರವಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಪ್ರಮುಖ ಸಭೆಯಲ್ಲಿ ಜಿಲ್ಲೆಯ ಗೃಹ, ವಾಣಿಜ್ಯ ವಿದ್ಯುತ್ ಗ್ರಾಹಕರು, ರೈತರು, ಕೈಗಾರಿಕೋದ್ಯಮಿಗಳು, ಗುತ್ತಿಗೆದಾರರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಕರಡು ನಿಯಮಾವಳಿಗಳ ಬಗ್ಗೆ ತಮ್ಮ ಆಕ್ಷೇಪಣೆ ಮತ್ತು ಸಲಹೆಗಳನ್ನು ಲಿಖಿತ ಹಾಗೂ ಮೌಖಿಕವಾಗಿ ಸಲ್ಲಿಸಿದರು.ಸಭೆಯಲ್ಲಿ ಮಾತನಾಡಿದ ಪ್ರಮುಖರು, ಹೊಸ ನಿಯಮಾವಳಿಗಳು ಜಾರಿಗೆ ಬರುವಾಗ ಗ್ರಾಹಕರ ಮತ್ತು ರೈತರ ಹಿತಾಸಕ್ತಿಗಳಿಗೆ ಯಾವುದೇ ಧಕ್ಕೆ ಬರಬಾರದು. ವಿದ್ಯುತ್ ಸಂಪರ್ಕ ಪ್ರಕ್ರಿಯೆ ಸರಳವಾಗಿರಬೇಕು. ದಂಡದ ನಿಯಮಗಳು ಗ್ರಾಹಕ ಸ್ನೇಹಿಯಾಗಿರಬೇಕು ಎಂದು ಆಗ್ರಹಿಸಿದರು. ಉದ್ಯಮಿಗಳು ಹೊಸ ಬಿಲ್ಲಿಂಗ್ ಮತ್ತು ಮೀಟರಿಂಗ್ ನಿಯಮಗಳಿಂದ ಕೈಗಾರಿಕೆಗಳ ಮೇಲಾಗುವ ಪರಿಣಾಮಗಳ ಕುರಿತು ಆಯೋಗದ ಗಮನ ಸೆಳೆದರು.ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಕೆ.ಇ.ಆರ್.ಸಿ. ಅಧ್ಯಕ್ಷ ಪಿ. ರವಿ ಕುಮಾರ್ ಅವರು, ಆ.14ರಂದು ಪ್ರಕಟಿಸಲಾದ ಇ.ಎಸ್.ಆರ್.-2026 ಕರಡು ಪ್ರತಿಯು ಇನ್ನು ಅಂತಿಮವಾಗಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾರ್ವಜನಿಕ ಅಹವಾಲು, ವಿಚಾರಣೆ ನಡೆಸಿ ಸಾರ್ವಜನಿಕರಿಂದ ಸಂಗ್ರಹಿಸುವ ಪ್ರತಿಯೊಂದು ಸಲಹೆ ಮತ್ತು ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿಯೆ ಸಾರ್ವಜನಿಕರ ಹಿತ ಕಾಯುವ ನಿಟ್ಟಿನಲ್ಲಿ ಅಗತ್ಯ ಬದಲಾವಣೆಗಳೊಂದಿಗೆ ಅಂತಿಮ ನಿಯಮಾವಳಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.ಸಭೆಯಲ್ಲಿ ಕೆ.ಇ.ಆರ್.ಸಿ ಆಯೋಗದ ಸದಸ್ಯ (ಕಾನೂನು) ಎಚ್.ಕೆ.ಜಗದೀಶ್, ಜಾವೇದ್ ಅಖ್ತರ್, ಕೆ.ಇ.ಆರ್.ಸಿ ಸಹಾಯಕ ಕಾರ್ಯದರ್ಶಿ ಪಿ.ಆರ್.ಗೋಪಿನಾಥ್ ಸಹಿತ ಜೆಸ್ಕಾಂ ಅಧಿಕಾರಿಗಳು, ಗ್ರಾಹಕರು, ರೈತರು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.