ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2026ರ ಅಂಗವಾಗಿ ನಗರದ ಜಿಲ್ಲಾಡಳಿತ ಕಚೇರಿಯ ಹೊರಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಪ್ರತಿಭೆ ಅನಾವರಣಗೊಳಿಸಿದರು.
ಕನ್ನಡಪ್ರಭ ವಾರ್ತೆ ಕಾರವಾರ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2026ರ ಅಂಗವಾಗಿ ನಗರದ ಜಿಲ್ಲಾಡಳಿತ ಕಚೇರಿಯ ಹೊರಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಪ್ರತಿಭೆ ಅನಾವರಣಗೊಳಿಸಿದರು.ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಪಂ ಹಾಗೂ ಕಾರವಾರದ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕೆ. ವಿದ್ಯಾರ್ಥಿಗಳು ರೂಪಿಸಿದ ವಿವಿಧ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ, ಅವರ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ, ಪ್ರೊಬೆಷನರಿ ಐಎಎಸ್ ಅಧಿಕಾರಿ ಜುಫಿಶಾನ ಹಖ್ ಹಾಗೂ ಕೋಸ್ಟ್ ಗಾರ್ಡ್ ಕಮಾಂಡರ್ ಸಂಜಯ ಪಾಲ್ ಸಹ ಪ್ರದರ್ಶನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರಯತ್ನ ಶ್ಲಾಘಿಸಿದರು.ಕುಮಟಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಐ.ಕೆ. ನಾಯಕ ಹಾಗೂ ಕಾರವಾರ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಪ್ರಕಾಶ ಅಣ್ವೇಕರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನಾವೀನ್ಯತೆಯ ಮಾದರಿಗಳನ್ನು ರೂಪಿಸುವಂತೆ ಡಾ. ಐ.ಕೆ. ನಾಯಕ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ರೋಹನ್ ರಾಜೇಂದ್ರ ಜಿ. ಭುಜ್ಲೆ ಸ್ವಾಗತಿಸಿದರು. ಶೈಕ್ಷಣಿಕ ಸಹಾಯಕಿ ಕವಿತಾ ಆರ್. ಮೇಸ್ತ ನಿರೂಪಿಸಿದರು. ಕಾರ್ಯಕ್ರಮದಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.ಸ್ಪರ್ಧೆಯಲ್ಲಿ ಅತ್ಯುತ್ತಮ ಮಾದರಿಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿಜೇತರು:ಪ್ರಥಮ- ಸುಜನ್ ಐ. ರೆಡ್ಡಿ ಮತ್ತು ಗಗನ ಎ. ಗಾಂವಕರ, ಅವೇ ಮಾರಿಯಾ ಪ್ರೌಢಶಾಲೆ, ಶಿರಸಿ. ದ್ವಿತೀಯ- ಸುಶಾಂತ ನಾಯ್ಕ ಮತ್ತು ನಿತೇಶ ಪಟಗಾರ ಸಿ.ವಿ.ಎಸ್.ಕೆ. ಪ್ರೌಢಶಾಲೆ, ಕುಮಟಾ. ತೃತೀಯ- ಕೇಶವ ಎನ್.ಗೌಡ ಮತ್ತು ಶ್ರೀನಿಧಿ ಎನ್. ಹೆಗಡೆ ಪ್ರಗತಿ ವಿದ್ಯಾಲಯ ಭರತಹಳ್ಳಿ, ಯಲ್ಲಾಪುರ.