ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ಸಹಕಾರ ಇಲಾಖೆ ದ.ಕ ಜಿಲ್ಲೆ ಸಹಕಾರದೊಂದಿಗೆ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಲಿ. ಮಂಗಳೂರು ನೇತೃತ್ವದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೂತನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ನ ಅಚ್ಚುತ ಮೂಡತ್ತಾಯ ಮಾತನಾಡಿ, ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವು ಹೆಚ್ಚಾಗಿ ಮಂಗಳೂರಿನಲ್ಲಿ ನಡೆಯುತ್ತಿತ್ತು. ಅದರೆ ಈ ಬಾರಿ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಯೂನಿಯನ್ ಜಿಲ್ಲಾಧ್ಯಕ್ಷರಾದ ಬಳಿಕ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹಳ್ಳಿಗೆ ತರುವ ಮೂಲಕ ಈ ಭಾಗದ ಪುತ್ತೂರು- ಕಡಬ ತಾಲೂಕಿನ ಸಹಕಾರ ಸಂಘದ ನಿರ್ದೇಶಕರು, ಸಿಬ್ಬಂದಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.
ಸಹಕಾರಿ ಕ್ಷೇತ್ರದಲ್ಲಿ ಎಷ್ಟೇ ವರ್ಷದ ಅನುಭವ ಇದ್ದರೂ ಕೂಡ ಮತ್ತೆ ಅಪ್‌ಡೇಟ್ ಆಗಬೇಕಾಗುತ್ತದೆ. ಕಾನೂನಿನ ಬದಲಾವಣೆ, ವ್ಯವಸ್ಥೆಯ ಬದಲಾವಣೆ, ಹೊಸ ಸುತ್ತೋಲೆಗಳು, ನಿಯಮಗಳು ಬರುತ್ತಲೇ ಇರುತ್ತವೆ. ಆ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮದ ಮೂಲಕ ಸಹಕಾರಿ ಶಿಕ್ಷಣದ ಜತೆಗೆ ನಾವು ಮತ್ತಷ್ಟು ಅಪ್‌ಡೇಟ್ ಆಗಲು ಸಾಧ್ಯವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಜಿಲ್ಲಾ ಸಹಕಾರ ಯೂನಿಯನ್ ಮೂಲಕ ಜಿಲ್ಲೆಯಲ್ಲಿ 5 ಕಡೆಗಳಲ್ಲಿ ತರಬೇತಿ ಕಾರ್ಯಕ್ರಮ ಆಯೋಜನೆ ಮಾಡಲಿದ್ದೇವೆ. ಸಹಕಾರ ಸಂಘಗಳು, ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವುದೇ ತರಬೇತಿ ಕಾರ್ಯಕ್ರಮದ ಮೂಲ ಉದ್ದೇಶ. ಸಹಕಾರ ಸಂಘದ ನಿರ್ದೇಶಕರು, ಸಿಬ್ಬಂದಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವ ಮೂಲಕ ಗ್ರಾಹಕರಿಗೆ, ಸದಸ್ಯರಿಗೆ ಉತ್ತಮ ರೀತಿಯ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.ನಿಂತು ಹೋಗಿರುವ ಸಹಕಾರ ಪತ್ರಿಕೆಯನ್ನು ಮತ್ತೆ ಏಪ್ರಿಲ್‌ನಲ್ಲಿ ಆರಂಭ ಮಾಡುವುದರ ಜತೆಗೆ ಜಿಲ್ಲಾ ಸಹಕಾರ ಯೂನಿಯನ್‌ಗೆ ಕಚೇರಿ ನಿರ್ಮಾಣ ಸೇರಿದಂತೆ ಮುಂದಿನ ಮಹಾಸಭೆಯಲ್ಲಿ ಯೂನಿಯನ್‌ನಿಂದ ಸಹಕಾರ ಸಂಘಗಳಿಗೆ ಡಿವಿಡೆಂಡ್ ನೀಡುವ ಸಂತೋಷದಾಯಕ ಸುದ್ದಿ ಹೊರಬರಲಿದೆ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮಂಜುನಾಥ ಎನ್.ಎಸ್., ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಸಂಜೀವ ಪೂಜಾರಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಸಾಂತ್ಯ, ಪುತ್ತೂರು ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರವೀಣ್ ರೈ ಮೇನಾಲ ವೇದಿಕೆಯಲ್ಲಿದ್ದರು.ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ. ಸ್ವಾಗತಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ವಂದಿಸಿದರು. ಕಾವು ಸಹಕಾರ ಸಂಘದ ಸಿಬ್ಬಂದಿ ಸುನೀಲ್ ನಿಧಿಮುಂಡ ನಿರೂಪಿಸಿದರು.